ADVERTISEMENT

ಬಾಬರಿ ಮಸೀದಿ ಧ್ವಂಸ ಪ್ರಕರಣ: ತೀರ್ಪಿನ ಗಡುವು ವಿಸ್ತರಿಸಿದ ಸುಪ್ರೀಂ ಕೋರ್ಟ್

ಏಜೆನ್ಸೀಸ್
Published 8 ಮೇ 2020, 12:15 IST
Last Updated 8 ಮೇ 2020, 12:15 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ತೀರ್ಪು ನೀಡಲು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ವಿಧಿಸಲಾಗಿದ್ದ ಗಡುವನ್ನು ಸುಪ್ರೀಂ ಕೋರ್ಟ್ ಆಗಸ್ಟ್ 31ಕ್ಕೆ ವಿಸ್ತರಿಸಿದೆ.

ಈಗ ವಿಧಿಸಲಾಗಿರುವ ಗಡುವನ್ನು ಉಲ್ಲಂಘಿಸುವುದಿಲ್ಲ ಎಂದು ವಿಚಾರಣಾ ನ್ಯಾಯಾಧೀಶರು ಖಾತ್ರಿಪಡಿಸಬೇಕು ಎಂದು ನ್ಯಾಯಮೂರ್ತಿ ಆರ್‌.ಎಫ್‌.ನಾರಿಮನ್ ಮತ್ತು ಸೂರ್ಯ ಕಾಂತ್ ಅವರಿದ್ದ ನ್ಯಾಯಪೀಠ ಹೇಳಿದೆ. ವಿಡಿಯೊ ಕಾನ್ಫರೆನ್ಸ್‌ ಸೌಲಭ್ಯ ಬಳಸಿಕೊಂಡು ಪ್ರಕ್ರಿಯೆ ಪೂರ್ಣಗೊಳಿಸುವಂತೆಯೂ ಸೂಚಿಸಿದೆ.

ವಿಚಾರಣಾ ನ್ಯಾಯಾಲಯವು ಆರು ತಿಂಗಳುಗಳ ಒಳಗೆ ಸಾಕ್ಷ್ಯಗಳ ದಾಖಲೀಕರಣ ಪೂರ್ಣಗೊಳಿಸಿ ಒಂಬತ್ತು ತಿಂಗಳುಗಳ ಒಳಗೆ ತೀರ್ಪು ನೀಡಬೇಕು ಎಂದು ಇದೇ ನ್ಯಾಯಪೀಠ 2019ರ ಜುಲೈ 19ರಂದು ನಿರ್ದೇಶಿಸಿತ್ತು. ವಿಚಾರಣೆ ನಡೆಸುತ್ತಿರುವ ಸಿಬಿಐ ವಿಶೇಷ ನ್ಯಾಯಾಧೀಶರ ಅಧಿಕಾರಾವಧಿಯನ್ನು ತೀರ್ಪು ಪ್ರಕಟವಾಗುವ ವರೆಗೆ ವಿಸ್ತರಿಸಲು ಆಡಳಿತಾತ್ಮಕ ಆದೇಶ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೂ ಸೂಚಿಸಿತ್ತು. ನ್ಯಾಯಾಧೀಶರು 2019ರ ಸೆಪ್ಟೆಂಬರ್ 30ರಂದು ನಿವೃತ್ತರಾಗಿಬೇಕಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಪೀಠವು ಅಧಿಕಾರಾವಧಿ ವಿಸ್ತರಿಸುವಂತೆ ಸೂಚಿಸಿತ್ತು.

ಸಾಕ್ಷ್ಯಗಳ ದಾಖಲೀಕರಣ ಪೂರ್ತಿಯಾಗಿಲ್ಲ. ಹೀಗಾಗಿ ತೀರ್ಪಿನ ಗಡುವು ವಿಸ್ತರಿಸಬೇಕು ಎಂದು ಮೇ 6ರಂದು ನ್ಯಾಯಾಧೀಶರು ಸುಪ್ರೀಂ ಕೋರ್ಟ್‌ಗೆ ಪತ್ರ ಬರೆದಿದ್ದರು.

1992ರ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿಯ ಹಿರಿಯ ನಾಯಕರಾದ ಎಲ್‌.ಕೆ.ಅಡ್ವಾಣಿ, ಮುರಳಿ ಮನೋಹರ ಜೋಷಿ, ಕಲ್ಯಾಣ್ ಸಿಂಗ್, ಉಮಾ ಭಾರತಿ ಮತ್ತು ಇತರ 13 ಮಂದಿ ವಿಚಾರಣೆ ಎದುರಿಸುತ್ತಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.