ADVERTISEMENT

ಗುಜರಾತ್‌ ಗಲಭೆ: ತೀಸ್ತಾ ಸೆಟಲ್‌ವಾಡ್‌ಗೆ ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ಜಾಮೀನು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಸೆಪ್ಟೆಂಬರ್ 2022, 14:15 IST
Last Updated 2 ಸೆಪ್ಟೆಂಬರ್ 2022, 14:15 IST
ತೀಸ್ತಾ ಸೆಟಲ್‌ವಾಡ್‌
ತೀಸ್ತಾ ಸೆಟಲ್‌ವಾಡ್‌   

ನವದೆಹಲಿ: 2002ರ ಗುಜರಾತ್ ಗಲಭೆಯಲ್ಲಿ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಉನ್ನತ ಅಧಿಕಾರಿಗಳನ್ನು ಸಿಲುಕಿಸಲು ಸುಳ್ಳು ಆರೋಪ ಮಾಡಿ, ನಕಲಿ ಸಾಕ್ಷ್ಯಾಧಾರ ಸೃಷ್ಟಿಸಿದಪ್ರಕರಣ ಸಂಬಂಧ ಜೂನ್‌ 25ರಂದು ಬಂಧಿಸಿರುವ ಸಾಮಾಜಿಕ ಕಾರ್ಯಕರ್ತೆತೀಸ್ತಾಸೆಟಲ್‌ವಾಡ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್, ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರಿದ್ದ ಪೀಠವು, ಗುಜರಾತ್‌ ಹೈಕೋರ್ಟ್‌ ಜಾಮೀನು ಅರ್ಜಿ ಇತ್ಯರ್ಥಪಡಿಸುವರೆಗೂ ತಮ್ಮ ಪಾಸ್‌ಪೋರ್ಟ್‌ ಅನ್ನುವಿಚಾರಣಾ ನ್ಯಾಯಾಲಯಕ್ಕೆ ಒಪ್ಪಿಸಬೇಕು.ಪ್ರಕರಣ ಸಂಬಂಧ ತನಿಖಾ ಸಂಸ್ಥೆಯ ವಿಚಾರಣೆಗೆ ಸಹಕರಿಸಬೇಕು ಎಂದು ತೀಸ್ತಾ ಅವರಿಗೆ ಷರತ್ತು ವಿಧಿಸಿದೆ.

ಅರ್ಜಿದಾರರು ಮಹಿಳೆ ಮತ್ತು ಬಂಧನ ಅವಧಿಯಲ್ಲಿ ಏಳು ದಿನಗಳ ಕಾಲ ಕಸ್ಟಡಿ ವಿಚಾರಣೆಗೆ ಒಳಗಾಗಿರುವುದನ್ನು ಪರಿಗಣಿಸಿ ಮಧ್ಯಂತರ ಜಾಮೀನು ನೀಡಿರುವುದಾಗಿ ಪೀಠ ಹೇಳಿದೆ.

ತೀಸ್ತಾ ಅವರ ಜಾಮೀನು ಅರ್ಜಿಯನ್ನು ಯಾವುದೇ ಪ್ರಭಾವಕ್ಕೆ ಒಳಗಾಗದೇ ಪರಿಶೀಲಿಸಬೇಕು. ಅಲ್ಲದೇ, ಅರ್ಜಿದಾರರನ್ನು ಶನಿವಾರ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. ವಿಚಾರಣಾ ನ್ಯಾಯಾಲಯ ನಿಗದಿಪಡಿಸುವ ಷರತ್ತುಗಳ ಮೇಲೆ ಬಿಡುಗಡೆ ಮಾಡಬೇಕು ಎಂದು ನ್ಯಾಯಪೀಠ ನಿರ್ದೇಶಿದೆ.

ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ವಿಳಂಬವಾದ ಹಿನ್ನೆಲೆಯಲ್ಲಿ ಗುಜರಾತ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ತೀಸ್ತಾ ಅವರ ಜಾಮೀನುಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಸೆ. 19ಕ್ಕೆ ನಿಗದಿಪಡಿಸಿತ್ತು. ಹೀಗಾಗಿ ತೀಸ್ತಾ ಮಧ್ಯಂತರ ಜಾಮೀನಿಗಾಗಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

ಗುರುವಾರವಷ್ಟೇ ಈ ಅರ್ಜಿ ವಿಚಾರಣೆ ಆರಂಭಿಸಿದ್ದಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್‌ ಅವರ ನೇತೃತ್ವದ ತ್ರಿಸದಸ್ಯ ಪೀಠವು, ಹೈಕೋರ್ಟ್‌ ತೀಸ್ತಾ ಅವರ ಜಾಮೀನು ಅರ್ಜಿಗೆ ಪ್ರತಿಕ್ರಿಯಿಸಲು ರಾಜ್ಯ ಸರ್ಕಾರಕ್ಕೆ ಆ.3ರಂದು ನೋಟಿಸ್‌ ನೀಡಿ, ಆರು ವಾರಗಳ ಬಳಿಕ ಅರ್ಜಿ ವಿಚಾರಣೆಗೆ ದಿನಾಂಕ ನಿಗದಿಪಡಿಸಿರುವುದಕ್ಕೆ ಅಚ್ಚರಿಗೊಂಡು, ಹೈಕೋರ್ಟ್‌ನ ಈ ವಿಳಂಬ ಧೋರಣೆಗೆ ಆಕ್ಷೇಪ ವ್ಯಕ್ತಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.