ಸುಪ್ರೀಂ ಕೋರ್ಟ್
ನವದೆಹಲಿ: ‘ಕಾನೂನು ಪದವೀಧರರು ನ್ಯಾಯಾಧೀಶರಾಗಬೇಕು ಎಂದಾದರೆ, ಕಡ್ಡಾಯವಾಗಿ ಕನಿಷ್ಠ ಮೂರು ವರ್ಷ ವಕೀಲರಾಗಿ ಕೆಲಸ ಮಾಡಿರಬೇಕು’ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದೆ.
ಅಖಿಲ ಭಾರತೀಯ ನ್ಯಾಯಾಧೀಶರ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ಕುರಿತು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ, ನ್ಯಾಯಮೂರ್ತಿಗಳಾದ ಅಗಸ್ಟೀನ್ ಜಾರ್ಜ್ ಮಸೀಹ್ ಮತ್ತು ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠ ಈ ತೀರ್ಪು ನೀಡಿದೆ.
‘ಎಲ್ಲ ರಾಜ್ಯ ಸರ್ಕಾರಗಳು ಈ ಬಗ್ಗೆ ನಿಯಮಗಳಲ್ಲಿ ತಿದ್ದುಪಡಿ ಮಾಡಿಕೊಳ್ಳಬೇಕು. ಕಾನೂನು ಪದವೀಧರರು ಮೂರು ವರ್ಷ ವಕೀಲರಾಗಿ ಕಾರ್ಯನಿರ್ವಹಿಸಿದ ಬಗ್ಗೆ ಕನಿಷ್ಠ 10 ವರ್ಷದಿಂದ ವಕೀಲಿಕೆ ಮಾಡುತ್ತಿರುವವರು ಪ್ರಮಾಣಪತ್ರ ನೀಡಬೇಕು’ ಎಂದು ಪೀಠ ಹೇಳಿದೆ.
ನ್ಯಾಯಾಲಯಗಳಲ್ಲಿ ಗುಮಾಸ್ತ ಹುದ್ದೆಯಲ್ಲಿದ್ದವರೂ ನ್ಯಾಯಾಧೀಶರಾಗಲು ಪರೀಕ್ಷೆ ಬರೆಯುವುದಾದರೆ, ಅವರ ಉದ್ಯೋಗದ ಅವಧಿಯನ್ನೂ ಗಣನೆಗೆ ತೆಗೆದುಕೊಳ್ಳಲಾಗುವುದು. ಆದರೆ, ಇವರು ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಒಂದು ವರ್ಷ ತರಬೇತಿ ಪಡೆದುಕೊಳ್ಳಬೇಕು’ ಎಂದು ತೀರ್ಪಿನಲ್ಲಿ ಹೇಳಲಾಗಿದೆ.
‘ಈಗಾಗಲೇ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದ್ದರೆ, ಅಲ್ಲಿ ಈ ನಿಯಮವನ್ನು ಪಾಲಿಸಬೇಕಾಗಿಲ್ಲ. ಆದರೆ, ಮುಂದಿನ ಬಾರಿಯ ನೇಮಕಾತಿ ಪ್ರಕ್ರಿಯೆಯಿಂದ ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಹೇಳಿದೆ.
‘ವಕೀಲರಾಗಿ ಯಾವ ದಿನದಿಂದ ಕಾರ್ಯನಿರ್ವಹಿಸಲು ಆರಂಭಿಸಲಾಗುತ್ತದೊ ಆ ದಿನದಿಂದ ಮೂರು ವರ್ಷದ ಅವಧಿಯನ್ನು ಲೆಕ್ಕ ಹಾಕಲಾಗುತ್ತದೆ. ಅಖಿಲ ಭಾರತ ವಕೀಲಿಕೆ ಪರೀಕ್ಷೆಯನ್ನು (ಎಐಬಿಇ) ಪಾಸು ಮಾಡಿದ ದಿನದಿಂದ ಲೆಕ್ಕ ಹಾಕುವುದಿಲ್ಲ’ ಎಂದು ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
‘ಕೇವಲ ಪುಸ್ತಕ ಜ್ಞಾನ ಸಾಲದು’
ಕಾನೂನು ಪದವಿ ಮುಗಿಸುತ್ತಿದ್ದಂತೆಯೇ ನ್ಯಾಯಾಧೀಶರಾಗಿ ನೇಮಕವಾಗುತ್ತಾರೆ. ಅಧಿಕಾರ ವಹಿಸಿಕೊಂಡ ಮೊದಲ ದಿನದಿಂದಲೇ ಆಸ್ತಿ ಸ್ವಾತಂತ್ರ್ಯ ಜೀವನ... ಹೀಗೆ ನಾನಾ ವಿಚಾರಗಳಿಗೆ ಸಂಬಂಧಿಸಿದ ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸಬೇಕಾಗುತ್ತದೆ. ಕೇವಲ ಪುಸ್ತಕದ ಜ್ಞಾನದಿಂದ ಮಾತ್ರವೇ ಈ ಎಲ್ಲ ಪ್ರಕರಣಗಳಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಸೀನಿಯರ್‌ಗಳೊಂದಿಗೆ ಕೆಲಸ ಮಾಡಿ ಅವರಿಗೆ ಸಹಾಯ ಮಾಡಿ ನ್ಯಾಯಾಂಗದ ಕುರಿತು ಕಲಿಯಬೇಕಾಗುತ್ತದೆ ಸುಪ್ರೀಂ ಕೋರ್ಟ್ ಪೀಠ
ಪ್ರಕರಣದ ಇತಿಹಾಸ ಏನು?
2002ರಲ್ಲಿ ನ್ಯಾಯಾಂಗ ಸೇವೆಗಳ ನಿಯಮಗಳಿಗೆ ತಿದ್ದುಪಡಿ ಮಾಡಿದ್ದ ಮಧ್ಯಪ್ರದೇಶದ ಹೈಕೋರ್ಟ್ ಮೂರು ವರ್ಷ ವಕೀಲ ವೃತ್ತಿಯನ್ನು ಕಡ್ಡಾಯ ಮಾಡಿತ್ತು. ಈ ತಿದ್ದುಪಡಿಯನ್ನು ಪ್ರಶ್ನಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ ಮಧ್ಯಪ್ರದೇಶ ಹೈಕೋರ್ಟ್‌ನ ಈ ತಿದ್ದುಪಡಿಯನ್ನು ಕೆಲವು ರಾಜ್ಯಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. ಆದ್ದರಿಂದ ದೇಶದಾದ್ಯಂತ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ನೇಮಕಾತಿ ನಿಯಮಗಳಿವೆ. ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದ ಎಲ್ಲ ರಾಜ್ಯಗಳಲ್ಲಿಯೂ ಈಗ ಒಂದೇ ರೀತಿಯ ನಿಯಮ ಜಾರಿಯಾಗಲಿದೆ. ಈ ತಿದ್ದುಪಡಿಗೆ ಕಾನೂನು ಪದವೀಧರರು ಮತ್ತು ಶಿಕ್ಷಣ ತಜ್ಞರು ವಿರೋಧ ವ್ಯಕ್ತಪಡಿಸಿದ್ದರು. ‘ಇದು ಕಾನೂನು ಪದವೀಧರರ ಸಮಾನ ಅವಕಾಶದ ಹಕ್ಕನ್ನು ನಿರಾಕರಿಸುತ್ತದೆ. ಇದು ಸಂವಿಧಾನ ನೀಡಿರುವ ಅವಕಾಶವನ್ನೂ ಮೀರುವ ವರ್ತನೆಯಾಗುತ್ತದೆ. ಇದರಿಂದ ಯುವಕರು ಈ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಹಿಂಜರಿಯುವಂತಾಗುತ್ತದೆ’ ಎಂದು ವಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.