
ಸುಪ್ರೀಂ ಕೋರ್ಟ್ ಹಾಗೂ ಪಠ್ಯದ ಚಿತ್ರ
ನವದೆಹಲಿ: ಎನ್‌ಸಿಇಆರ್‌ಟಿ 8ನೇ ತರಗತಿಯ ಪಠ್ಯದಲ್ಲಿ 'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ವಿಷಯವನ್ನು ಸೇರಿಸಿರುವ ಕುರಿತು ಸ್ವಯಂಪ್ರೇರಿತ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಬುಧವಾರ ನಿರ್ಧರಿಸಿದೆ.
ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತಿನ (ಎನ್‌ಸಿಇಆರ್‌ಟಿ) ಈ ಕ್ರಮವು ನ್ಯಾಯಾಂಗ ವ್ಯವಸ್ಥೆಗೆ ಕಳಂಕ ತರುವ 'ಉದ್ದೇಶಪೂರ್ವಕ' ಹಾಗೂ 'ಲೆಕ್ಕಾಚಾರದ' ಕ್ರಮದಂತೆ ತೋರುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು ಹೇಳಿದೆ.
ಈ ವಿಚಾರವನ್ನು ಸ್ವಯಂಪ್ರೇರಿತವಾಗಿ ವಿಚಾರಣೆಗೆ ಪರಿಗಣಿಸುವಂತೆ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಎ.ಎಂ. ಸಿಂಘ್ವಿ ಅವರು ನ್ಯಾಯಾಲಯವನ್ನು ಒತ್ತಾಯಿಸಿದರು.
ನ್ಯಾಯಾಂಗವೇ ಭ್ರಷ್ಟವಾಗಿದೆ ಎಂಬುದಾಗಿ 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋಧಿಸುತ್ತಿರುವುದು ಬೇಸರ ತಂದಿದೆ ಎಂದು ಸಿಬಲ್ ಹೇಳಿದ್ದಾರೆ.
ಈ ಸಂಬಂಧ, ಪರಿಷ್ಕೃತ ಪಠ್ಯದ ಬಗ್ಗೆ ನ್ಯಾಯಪೀಠವು ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ.
'ಸಂಸ್ಥೆಯನ್ನು ಮಾನಹಾನಿ ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ. ಇಂತಹ ಪ್ರಯತ್ನಗಳನ್ನು ಹೇಗೆ ಎದುರಿಸಬೇಕು ಎಂಬುದು ತಿಳಿದಿದೆ' ಎಂದು ನ್ಯಾ. ಸೂರ್ಯಕಾಂತ್ ಹೇಳಿದ್ದಾರೆ.
ಪರಿಷ್ಕೃತ ಪಠ್ಯದಲ್ಲಿ ಏನಿದೆ?
ಎನ್‌ಸಿಇಆರ್‌ಟಿಯು 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ 'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಹಾಗೂ 'ಸಾಕಷ್ಟು ಪ್ರಕರಣಗಳು ಬಾಕಿ' ವಿಷಯಗಳನ್ನು ಸೇರಿಸಿದೆ. 'ಸಮಾಜದಲ್ಲಿ ನ್ಯಾಯಾಂಗದ ಪಾತ್ರ' ಎಂಬ ಶೀರ್ಷಿಕೆಯ ಅಧ್ಯಾಯದಲ್ಲಿ ಈ ವಿಚಾರಗಳು ಇವೆ.
'ನ್ಯಾಯದಾನ ವಿಳಂಬವಾದರೆ, ನ್ಯಾಯ ನಿರಾಕರಿಸಿದಂತೆ' ಹಾಗೂ 'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಎಂಬ ಎರಡು ಭಾಗಗಳಲ್ಲಿ, ಭ್ರಷ್ಟಾಚಾರ ಮತ್ತು ಪ್ರಕರಣಗಳ ಬಾಕಿ ಸೇರಿದಂತೆ ನ್ಯಾಯಾಂಗ ಎದುರಿಸುತ್ತಿರುವ ಸವಾಲುಗಳನ್ನು ವಿವರಿಸಲಾಗಿದೆ.
ಪರಿಷ್ಕರಣೆಗೂ ಮುನ್ನ, ನ್ಯಾಯಾಂಗದ ರಚನೆ ಹಾಗೂ ಪಾತ್ರದ ಕುರಿತ ವಿಚಾರಗಳು ಪಠ್ಯದಲ್ಲಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.