ADVERTISEMENT

ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ತೀರ್ಪಿಗೆ ಬದ್ಧವಾಗಿರಬೇಕು– ಸುಪ್ರೀಂ ಕೋರ್ಟ್‌

ಪಿಟಿಐ
Published 28 ನವೆಂಬರ್ 2025, 14:33 IST
Last Updated 28 ನವೆಂಬರ್ 2025, 14:33 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವಂತೆ ಮಹಾರಾಷ್ಟ್ರ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ (ಎಸ್‌ಇಸಿ) ಸೂಚಿಸಿರುವ ಸುಪ್ರೀಂ ಕೋರ್ಟ್‌, ಶೇ 50ರಷ್ಟು ಮೀಸಲಾತಿ ಮಿತಿಯನ್ನು ಉಲ್ಲಂಘಿಸಿರುವ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶಗಳು ತನ್ನ ತೀರ್ಪನ್ನು ಅವಲಂಬಿಸಿರುತ್ತದೆ ಎಂದು ಸ್ಪಷ್ಟಪಡಿಸಿದೆ.

ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್‌, ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರ ಪೀಠವು, ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ಮೀಸಲಾತಿ ಕುರಿತ 27 ಅರ್ಜಿಗಳನ್ನು 2026ರ ಜನವರಿ 21ರಂದು ಮೂವರು ನ್ಯಾಯಮೂರ್ತಿಗಳ ಪೀಠ ವಿಚಾರಣೆ ಕೈಗೆತ್ತಿಕೊಳ್ಳಲಿದೆ ಎಂದು ಹೇಳಿತು.

ದೀರ್ಘಕಾಲದಿಂದ ಬಾಕಿ ಇರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಾಲ್ಕು ತಿಂಗಳೊಳಗೆ ನಡೆಸುವಂತೆ ಪೀಠವು 2025ರ ಮೇ ತಿಂಗಳಿನಲ್ಲಿ ನಿರ್ದೇಶಿಸಿತ್ತು. 

ADVERTISEMENT

ಎಸ್‌ಇಸಿ ಪರ ಹಾಜರಾದ ಹಿರಿಯ ವಕೀಲ ಬಲ್ಬೀರ್‌ ಸಿಂಗ್‌, ‘ಒಟ್ಟು 246 ಪುರಸಭೆಗಳು ಮತ್ತು 42 ನಗರ ಪಂಚಾಯತ್‌ಗಳಲ್ಲಿ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ. ಈ ಪೈಕಿ 40 ಪುರಸಭೆಗಳು ಮತ್ತು 17 ನಗರ ಪಂಚಾಯತ್‌ಗಳಲ್ಲಿ ಮಾತ್ರ ಮೀಸಲಾತಿ ಮಿತಿ ಶೇ 50 ಅನ್ನು ದಾಟಿದೆ’ ಎಂದು ಮಾಹಿತಿ ನೀಡಿದರು.

ಈ ಹೇಳಿಕೆಯನ್ನು ದಾಖಲಿಸಿದ ಪೀಠ, ‘ಎಸ್‌ಇಸಿ ಚುನಾವಣೆಯನ್ನು ಮುಂದುವರಿಸಬಹುದು. ಆದರೆ ಫಲಿತಾಂಶಗಳು ಈ ಪ್ರಕರಣದ ತೀರ್ಪನ್ನು ಅವಲಂಬಿಸಿರುತ್ತದೆ’ ಎಂದು ಹೇಳಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.