ಚುನಾವಣಾ ಆಯೋಗ
ಪಟ್ನಾ: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್) ಭಾಗವಾಗಿ ಮತದಾರರ ಕರಡು ಪಟ್ಟಿಯಿಂದ ಅಳಿಸಿಹಾಕಲಾಗಿದ್ದ 65 ಲಕ್ಷ ಜನರ ಹೆಸರುಗಳನ್ನು ಚುನಾವಣಾ ಆಯೋಗ ಸೋಮವಾರ ಸಾರ್ವಜನಿಕವಾಗಿ ಪ್ರಕಟಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರಡು ಪಟ್ಟಿಯಿಂದ ಹೊರಗುಳಿದಿರುವ ಮತದಾರರ ಹೆಸರು ಮತ್ತು ವಿವರಗಳನ್ನು ಆಗಸ್ಟ್ 19ರ ಒಳಗಾಗಿ ಪ್ರಕಟಿಸುವಂತೆ ಮತ್ತು ತನ್ನ ನಿರ್ದೇಶನದ ಪಾಲನೆಗೆ ಸಂಬಂಧಿಸಿದ ವರದಿಯನ್ನು ಆಗಸ್ಟ್ 22ರಂದು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಇದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
‘ಗೈರುಹಾಜರಾದವರು, ಸ್ಥಳಾಂತರಗೊಂಡವರು ಮತ್ತು ಮೃತಪಟ್ಟಿರುವ ಮತದಾರರ ಹೆಸರುಗಳನ್ನು ಆಯೋಗ ಚುನಾವಣಾ ಬೂತ್‌ಗಳಲ್ಲಿ ಪ್ರಕಟಿಸಿದೆ. ಈ ಪಟ್ಟಿಯನ್ನು ಆನ್‌ಲೈನ್‌ನಲ್ಲೂ ಪ್ರಕಟಿಸುವ ಸಾಧ್ಯತೆ ಇದೆ’ ಎಂದು ಅವರು ತಿಳಿಸಿದ್ದಾರೆ.
ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಪ್ರಕಾರ, ಈ ಪಟ್ಟಿಯನ್ನು ರೋಹತಾಸ್, ಬೇಗುಸರಾಯ್, ಅರವಲ್, ಶಿವನ್, ಭೋಜಪುರ ಮತ್ತು ಇತರ ಬೂತ್‌ಗಳಲ್ಲಿ ಪ್ರದರ್ಶಿಸಲಾಗಿದೆ.
ಚುನಾವಣಾ ಆಯೋಗವು ಬಿಹಾರದಲ್ಲಿ ಎಸ್‌ಐಆರ್ ನಡೆಸಿದ ನಂತರ ಸಿದ್ಧಪಡಿಸಿರುವ ಮತದಾರರ ಕರಡು ಪಟ್ಟಿಯಿಂದ ಸುಮಾರು 65 ಲಕ್ಷ ಜನರ ಹೆಸರುಗಳನ್ನು ಕೈಬಿಟ್ಟಿದೆ. ರಾಜ್ಯದಲ್ಲಿ 7.89 ಕೋಟಿ ಮತದಾರರಿದ್ದರು. ಪರಿಷ್ಕರಣೆ ಬಳಿಕ ಈ ಸಂಖ್ಯೆ ಸುಮಾರು 7.24 ಕೋಟಿಗೆ ಇಳಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.