ADVERTISEMENT

ಸುಪ್ರೀಂ ಕೋರ್ಟ್‌ ಆದೇಶದಂತೆ ಮಹಾದೇವಿ ಆನೆಯನ್ನು ಸ್ಥಳಾಂತರಿಸಲಾಗಿತ್ತು; ವಂತಾರಾ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 13:20 IST
Last Updated 6 ಆಗಸ್ಟ್ 2025, 13:20 IST
<div class="paragraphs"><p>ಮಹಾದೇವಿ</p></div>

ಮಹಾದೇವಿ

   

ಗಾಂಧಿನಗರ(ಗುಜರಾತ್): ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲ್ಲೂಕಿನ ನಾಂದಣಿ  ಜೈನ ಮಂದಿರವೊಂದರಲ್ಲಿ ಸಾಕಾನೆಯಾಗಿದ್ದ 36 ವರ್ಷದ ಮಹಾದೇವಿಯನ್ನು (ಮಾಧುರಿ) ಸುಪ್ರೀಂ ಕೋರ್ಟ್‌ ಮತ್ತು ಬಾಂಬೆ ಕೋರ್ಟ್ ಆದೇಶದ ಮೇರೆಗೆ ವಂತಾರಾ ಮೃಗಾಲಯಕ್ಕೆ ಸ್ಥಳಾಂತರಿಸಲಾಯಿತೇ ಹೊರತು ನಾವಾಗಿಯೇ ತೆಗೆದುಕೊಂಡ ನಿರ್ಧಾರವಲ್ಲ ಎಂದು ವಂತಾರಾ ಸ್ಪಷ್ಟನೆ ನೀಡಿದೆ.

ಮಹಾದೇವಿ ಆನೆಯನ್ನು ವಂತಾರಾ ಮೃಗಾಲಯಕ್ಕೆ ಸ್ಥಳಾಂತರಿಸಿದ ಬೆನ್ನಲ್ಲೇ ವಂತಾರಾ ಮತ್ತು ರಿಲಯನ್ಸ್ ಸಂಸ್ಥೆ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ವಂತಾರಾ ಪ್ರಕಟಣೆ ಹೊರಡಿಸಿದೆ.

ADVERTISEMENT

ಮಹಾದೇವಿ ಆನೆಯನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಪ್ರಾಣಿ ದಯಾ ಸಂಘಟನೆ ‘ಪೆಟಾ’ ಈ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್ ಮೊರೆ ಹೋಗಿತ್ತು. ಮನವಿ ಪುರಸ್ಕರಿಸಿದ್ದ ಬಾಂಬೆ ಹೈಕೋರ್ಟ್ ಮಹಾದೇವಿ ಪುನರ್ವಸತಿಗೆ ಆದೇಶ ನೀಡಿತ್ತು. ಬಳಿಕ ಸುಪ್ರೀಂ ಕೋರ್ಟ್ ಈ ಆದೇಶವನ್ನು ಎತ್ತಿಹಿಡಿದಿತ್ತು.

ಸದ್ಯ ಈಗ ಮಹಾದೇವಿ ಜಾಮ್ ನಗರದ ರಾಧೆಕೃಷ್ಣ ದೇಗುಲದ ಟ್ರಸ್ಟ್‌ನಲ್ಲಿ ವಂತಾರಾ ವತಿಯಿಂದ ಆರೈಕೆ ಮಾಡಲಾಗುತ್ತಿದೆ. ಆದರೆ ಜೈನಮಠದಿಂದ ಮಹಾದೇವಿಯನ್ನು ಸ್ಥಳಾಂತರಿಸಲಾಯಿತೋ ಆಗಿನಿಂದ ಭಕ್ತರು ಹಾಗೂ ಸ್ಥಳೀಯ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಹಾದೇವಿ ಬಗೆಗಿನ ಧಾರ್ಮಿಕ ಮತ್ತು ಭಾವನಾತ್ಮಕ ನಂಟನ್ನು ವಂತಾರಾ ಗೌರವಿಸುತ್ತದೆ. ಮತ್ತೆ ಆನೆಯನ್ನು ಜೈನಮಠಕ್ಕೆ ವಾಪಸ್‌ ಕಳುಹಿಸುವುದಕ್ಕೆ ಅಗತ್ಯವಿರುವ ಕಾನೂನು ಸಂಬಂಧಿತ ಅರ್ಜಿಗಳನ್ನು ಸಲ್ಲಿಸಲು ವಂತಾರಾ ಸಿದ್ಧವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಮಹಾದೇವಿ ಆನೆಯನ್ನು ವಂತಾರಾದ ಇಚ್ಧೆ ಮೇರೆಗೆ ಸ್ಥಳಾಂತರಿಸಿದ್ದಲ್ಲ. ಧಾರ್ಮಿಕ ಆಚರಣೆ ಅಥವಾ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಯಾವುದೇ ಉದ್ದೇಶವೂ ವಂತಾರಾಕ್ಕೆ ಇಲ್ಲ ಎಂದು ಸ್ಪಷ್ಟನೆ ನೀಡಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಇಂದು (ಬುಧವಾರ) ಮುಂಬೈನಲ್ಲಿ ವಂತಾರಾದ ತಂಡವನ್ನು ಭೇಟಿಯಾದರು. ವಂತಾರಾವು ನ್ಯಾಯಾಲಯದ ಆದೇಶಗಳನ್ನು ಪಾಲಿಸುತ್ತಿದೆ. ಮಹಾದೇವಿಯನ್ನು ನಮ್ಮ ವಶಕ್ಕೆ ಪಡೆಯುವ ಯಾವುದೇ ಉದ್ದೇಶವನ್ನೂ ಹೊಂದಿಲ್ಲ ಎಂದು ವಂತಾರಾ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.