ADVERTISEMENT

ಮಸೂದೆಗಳಿಗೆ ಅಂಕಿತ ಹಾಕಲು ವಿಳಂಬ ಧೋರಣೆ; ಸುಪ್ರೀಂ ಕೋರ್ಟ್ ಪ್ರಶ್ನೆ

ಮಸೂದೆಗಳಿಗೆ ರಾಜ್ಯಪಾಲರ ಅಂಕಿತ; ರಾಜ್ಯಗಳು ಅರ್ಜಿ ಸಲ್ಲಿಸುವಂತಿಲ್ಲ– ಕೇಂದ್ರ

ಪಿಟಿಐ
Published 29 ಆಗಸ್ಟ್ 2025, 0:30 IST
Last Updated 29 ಆಗಸ್ಟ್ 2025, 0:30 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ವಿಧಾನಸಭೆಗಳಲ್ಲಿ ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ಹಾಕಲು ಕೆಲವು ರಾಜ್ಯಪಾಲರು ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಸುಪ್ರೀಂ ಕೋರ್ಟ್‌ ಗುರುವಾರ ಪ್ರಶ್ನಿಸಿದೆ.

ಮಸೂದೆಗಳಿಗೆ ಅಂಕಿತ ಹಾಕದೆ ‘ಸುದೀರ್ಘ ಅವಧಿ’ಗೆ ತಮ್ಮ ಬಳಿ ಇರಿಸಿಕೊಳ್ಳಲು ರಾಜ್ಯಪಾಲರಿಗೆ ಅನುಮತಿಸಿದರೆ, ಸಂವಿಧಾನದ 200ನೇ ವಿಧಿಯಲ್ಲಿ ಬಳಸಿರುವ ‘ಸಾಧ್ಯವಾದಷ್ಟು ಬೇಗ’ ಎಂಬ ಪದವು ತನ್ನ ಉದ್ದೇಶವನ್ನು ಪೂರೈಸುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ನೇತೃತ್ವದ ಪೀಠ ತಿಳಿಸಿದೆ.

ADVERTISEMENT

ಮಸೂದೆಗೆ ಅಂಕಿತ ಹಾಕಲು ‘ಅರು ವಾರಗಳ ಮಿತಿ’ಯನ್ನು ಸಂವಿಧಾನ ರಚನೆಕಾರರು 200ನೇ ವಿಧಿಯಲ್ಲಿ ಉದ್ದೇಶಪೂರ್ವಕವಾಗಿ ‘ಸಾಧ್ಯವಾದಷ್ಟು ಬೇಗ’ ಎಂಬ ಪದಕ್ಕೆ ಬದಲಾಯಿಸಿದ್ದಾರೆ ಎಂದು ಪೀಠವು ಹೇಳಿತು. ಮಸೂದೆಗಳ ಭವಿಷ್ಯವನ್ನು ನಿರ್ಧರಿಸುವಾಗ ‘ಸಾಧ್ಯವಾದಷ್ಟು ಬೇಗ’ ಎಂಬ ಪದವನ್ನು ನಿರ್ಲಕ್ಷಿಸಬಹುದೇ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತು.

ರಾಜ್ಯ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ಹಾಕಲು ಕಾಲಮಿತಿ ನಿಗದಿಪಡಿಸಬಹುದೇ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉಲ್ಲೇಖಿಸಿರುವ ಸಾಂವಿಧಾನಿಕ ಪ್ರಶ್ನೆಗಳ ಕುರಿತ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ವಿಕ್ರಮನಾಥ್, ಪಿ.ಎಸ್‌.ನರಸಿಂಹ ಮತ್ತು ಎ.ಎಸ್‌.ಚಂದೂರ್‌ಕರ್ ಅವರು ಪೀಠದಲ್ಲಿದ್ದಾರೆ. 

ಅರ್ಜಿ ಸಲ್ಲಿಸುವಂತಿಲ್ಲ: 

ವಿಧಾನಸಭೆಗಳಲ್ಲಿ ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ಹಾಕುವುದಕ್ಕೆ ಸಂಬಂಧಿಸಿ ರಾಜ್ಯಪಾಲರು ಮತ್ತು ರಾಷ್ಟ್ರಪತಿ ಕೈಗೊಳ್ಳುವ ಕ್ರಮಗಳ ವಿರುದ್ಧ ರಾಜ್ಯ ಸರ್ಕಾರಗಳು ಸುಪ್ರೀಂ ಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸುವಂತಿಲ್ಲ ಎಂದು ಕೆಂದ್ರ ಸರ್ಕಾರ ಇದಕ್ಕೂ ಮುನ್ನ ಸುಪ್ರೀಂ ಕೋರ್ಟ್‌ಗೆ ತಿಳಿಸಿತು.

ಮೂಲಭೂತ ಹಕ್ಕುಗಳ ಉಲ್ಲಂಘನೆ ವಿಚಾರದಲ್ಲಿ ರಾಜ್ಯಗಳು ಸಂವಿಧಾನದ 32ನೇ ವಿಧಿಯ ಅಡಿಯಲ್ಲಿ ರಿಟ್ ಅರ್ಜಿ ಸಲ್ಲಿಸಬಹುದೇ ಎಂಬ ಬಗ್ಗೆ ರಾಷ್ಟ್ರಪತಿಯವರು ಸುಪ್ರೀಂ ಕೋರ್ಟ್‌ನ ಅಭಿಪ್ರಾಯವನ್ನು ಪಡೆಯಲು ಬಯಸುತ್ತಾರೆ ಎಂದು ಕೇಂದ್ರ ಸರ್ಕಾರದ ಪರ ಹಾಜರಾದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಪೀಠಕ್ಕೆ ತಿಳಿಸಿದರು.

ತಮಿಳುನಾಡು ಸರ್ಕಾರ ಮತ್ತು ಅಲ್ಲಿನ ರಾಜ್ಯಪಾಲರ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಏಪ್ರಿಲ್‌ 8ರಂದು ನೀಡಿದ್ದ ತೀರ್ಪನ್ನು ಸಾಲಿಸಿಟರ್‌ ಜನರಲ್ ಉಲ್ಲೇಖಿಸಿದರು. ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ನಿಗದಿತ ಕಾಲಮಿತಿಯೊಳಗೆ ಅಂಕಿತ ಹಾಕದಿದ್ದರೆ ರಾಜ್ಯಗಳು ನೇರವಾಗಿ ಸುಪ್ರೀಂ ಕೋರ್ಟ್‌ ಮೊರೆ ಹೋಗಬಹುದು ಎಂದು ಸುಪ್ರೀಂ ಕೋರ್ಟ್‌ ಪೀಠ ಹೇಳಿತ್ತು.

ಇಬ್ಬರು ನ್ಯಾಯಮೂರ್ತಿಗಳ ಪೀಠ ಏಪ್ರಿಲ್‌ 8ರಂದು ನೀಡಿದ್ದ ತೀರ್ಪಿನ ಬಗ್ಗೆ ಯಾವುದೇ ಅಭಿಪ್ರಾಯ ಹೇಳುವುದಿಲ್ಲ ಎಂದ ಸಿಜೆಐ ತಿಳಿಸಿದರು. ಆದರೆ, ರಾಜ್ಯಪಾಲರು ಮಸೂದೆಯನ್ನು ಆರು ತಿಂಗಳವರೆಗೆ ತಮ್ಮಲ್ಲೇ ಇಟ್ಟುಕೊಳ್ಳುವುದು ಸಮರ್ಥನೀಯವಲ್ಲ ಎಂದರು.

ಮೆಹ್ತಾ ವಾದ...

* ರಾಜ್ಯಪಾಲರು ಮತ್ತು ರಾಷ್ಟ್ರಪತಿಯ ವಿರುದ್ಧ ರಾಜ್ಯಗಳು ಸಂವಿಧಾನದ 32ನೇ ವಿಧಿಯಡಿ ಅರ್ಜಿ ಸಲ್ಲಿಸುವುದು ಸಮರ್ಥನೀಯವಲ್ಲ

* ರಾಜ್ಯ ಸರ್ಕಾರಗಳು ಈ ವಿಚಾರದಲ್ಲಿ ಯಾವುದೇ ನಿರ್ದೇಶನಗಳನ್ನು ನೀಡುವಂತಿಲ್ಲ

* ಮಸೂದೆಗಳ ಬಗ್ಗೆ ರಾಷ್ಟ್ರಪತಿ ಮತ್ತು ರಾಜ್ಯಪಾಲರು ನಿರ್ಧಾರ ತೆಗೆದುಕೊಳ್ಳುವ ವಿಚಾರವು ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡುವಂತಿಲ್ಲ 

‘ಕಾರ್ಯಾಂಗದ ಮೇಲೆ ಅಧಿಕಾರ ಚಲಾಯಿಸಬಾರದು’

ರಾಜ್ಯಪಾಲರು ರಾಜ್ಯ ಕಾರ್ಯಾಂಗ ಮತ್ತು ಶಾಸಕಾಂಗದ ಮೇಲೆ ಅಧಿಕಾರ ಚಲಾಯಿಸಲು ಸಾಧ್ಯವಿಲ್ಲ ಎಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ‘ರಾಜ್ಯಪಾಲರು ಶಾಸಕಾಂಗದ ಮೇಲೆ ಅಧಿಕಾರ ಚಲಾಯಿಸುವುದು ‘ಒಂದೇ ಪೊರೆಯಲ್ಲಿ ಎರಡು ಕತ್ತಿ’ಗಳನ್ನು ಇಡುವುದಕ್ಕೆ ಸಮಾನ. ಅದಕ್ಕೆ ಅವಕಾಶ ನೀಡಿದರೆ ರಾಜ್ಯಪಾಲರು ಸೂಪರ್‌ ಮುಖ್ಯಮಂತ್ರಿಯಾಗುವರು. ಚುನಾಯಿತ ಮುಖ್ಯಮಂತ್ರಿ ಪ್ರಜಾಪ್ರಭುತ್ವ ತತ್ವಗಳಡಿ ಕಾರ್ಯನಿರ್ವಹಿಸುವುದಕ್ಕೆ ತಡೆ ಉಂಟಾಗಬಹುದು’ ಎಂದು ತಮಿಳುನಾಡು ಸರ್ಕಾರವನ್ನು ಪ್ರತಿನಿಧಿಸಿದ ಹಿರಿಯ ವಕೀಲ ಎ.ಎಂ.ಸಿಂಘ್ವಿ ವಾದಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಬಿ.ಆರ್‌.ಗವಾಯಿ ‘ನಾನು ಸಾಲಿಸಿಟರ್‌ ಜನರಲ್‌ ಅವರಿಗೆ ಆರಂಭದಿಂದಲೂ ಇದನ್ನೇ ಕೇಳುತ್ತಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.