ADVERTISEMENT

ವಿಚ್ಛೇದಿತ ಪುತ್ರಿಗಿಲ್ಲ ಅನುಕಂಪದ ಉದ್ಯೋಗ: ಸುಪ್ರೀಂ ಕೋರ್ಟ್

ಕರ್ನಾಟಕದ ಅರ್ಜಿಯ ವಿಚಾರಣೆ ವೇಳೆ ಸರ್ವೋಚ್ಚ ನ್ಯಾಯಾಲಯ ಸ್ಪಷ್ಟನೆ

ಆಶಿಶ್ ತ್ರಿಪಾಠಿ
Published 14 ಸೆಪ್ಟೆಂಬರ್ 2021, 3:25 IST
Last Updated 14 ಸೆಪ್ಟೆಂಬರ್ 2021, 3:25 IST
ಸುಪ್ರೀಂ ಕೋರ್ಟ್ (ಪಿಟಿಐ ಚಿತ್ರ)
ಸುಪ್ರೀಂ ಕೋರ್ಟ್ (ಪಿಟಿಐ ಚಿತ್ರ)   

ನವದೆಹಲಿ: ಸರ್ಕಾರಿ ನೌಕರರು ಮರಣ ಹೊಂದಿದ ಬಳಿಕ ಅವರ ಪುತ್ರಿ ವಿವಾಹ ವಿಚ್ಛೇದನ ಪಡೆದರೆ ಅಂಥ ಸಂದರ್ಭದಲ್ಲಿ ಅವರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ಉದ್ಯೋಗ ನೀಡಲಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಕರ್ನಾಟಕಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ವೇಳೆ ಸರ್ವೋಚ್ಛ ನ್ಯಾಯಾಲಯ ಈ ಅಂಶವನ್ನು ಸ್ಪಷ್ಟಪಡಿಸಿದೆ.

ಮಂಡ್ಯ ಜಿಲ್ಲಾ ಖಜಾನೆಯಲ್ಲಿ ಸೆಕೆಂಡ್ ಡಿವಿಷನ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ದಿ. ಪಿ. ಭಾಗ್ಯಮ್ಮ ಅವರ ಪುತ್ರಿ ವಿ. ಸೌಮ್ಯಶ್ರೀ ಅವರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವಂತೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಖಜಾನೆ ನಿರ್ದೇಶಕರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ADVERTISEMENT

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಆರ್.ಶಾ ಮತ್ತು ಅನಿರುದ್ಧ ಬೋಸ್ ಅವರಿದ್ದ ಪೀಠವು ಸೌಮ್ಯಶ್ರೀ ಅವರು ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆಯಲು ಅರ್ಹರಲ್ಲ ಎಂದು ಹೇಳಿದೆ.

‘ಕರ್ನಾಟಕ ನಾಗರಿಕ ಸೇವಾ (ಸಹಾನುಭೂತಿ ಆಧಾರದ ನೇಮಕಾತಿ) ನಿಯಮಗಳು – 1996’ ಪ್ರಕಾರ, ಸರ್ಕಾರಿ ಉದ್ಯೋಗಿಯ ವಿಚ್ಛೇದಿತ ಪುತ್ರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಲು ಅವಕಾಶವಿಲ್ಲ. ಉದ್ಯೋಗಿಯನ್ನೇ ಅವಲಂಬಿಸಿದ್ದ ಮದುವೆಯಾಗದ ಅಥವಾ ವಿಧವೆ ಪುತ್ರಿಗೆ ಮಾತ್ರ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಬಹುದಾಗಿದೆ ಎಂದು ಪೀಠ ಹೇಳಿದೆ.

ಅನುಕಂಪದ ಆಧಾರದ ನೇಮಕಾತಿ ನಿಯಮಗಳಿಗೆ 2021ರಲ್ಲಿ ತಿದ್ದುಪಡಿ ಮಾಡಲಾಗಿದ್ದು, ‘ವಿಚ್ಛೇದಿತ ಪುತ್ರಿ’ಯನ್ನೂ ಸೇರ್ಪಡೆಗೊಳಿಸಲಾಗಿದೆ. ಆದರೆ, ಉದ್ಯೋಗಿ ಮರಣ ಹೊಂದಿದ ನಂತರ ವಿಚ್ಛೇದನ ಪಡೆದ ಸಂದರ್ಭದಲ್ಲಿ ಇದನ್ನು ಪರಿಗಣಿಸಲಾಗದು ಎಂದು ಕೋರ್ಟ್ ಹೇಳಿದೆ.

ಸೌಮ್ಯಶ್ರೀ ಅವರ ವಿವಾಹ ಸಿಂಧುವಾಗಿದ್ದಾಗಲೇ 2012ರ ಮಾರ್ಚ್ 25ರಂದು ಪಿ. ಭಾಗ್ಯಮ್ಮ ಮೃತಪಟ್ಟಿದ್ದರು. 2012ರ ಸೆಪ್ಟೆಂಬರ್ 12ರಂದು ಸೌಮ್ಯಶ್ರೀ ಅವರು ಸಮ್ಮತಿಯೊಂದಿಗೆ ವಿಚ್ಛೇದನ ಪಡೆದಿದ್ದರು. ಅವರ ವಿಚ್ಛೇದನವನ್ನು 2013ರ ಮಾರ್ಚ್ 20ರಂದು ಮಂಡ್ಯದ ನ್ಯಾಯಾಲಯವು ಊರ್ಜಿತಗೊಳಿಸಿತ್ತು. ಇದಾದ ಮರುದಿನವೇ, ಅಂದರೆ 2013ರ ಮಾರ್ಚ್ 21ರಂದು ಸೌಮ್ಯಶ್ರೀ ಅನುಕಂಪದ ಆಧಾರದ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.