ADVERTISEMENT

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಸೋಮವಾರ ಐವರಿಂದ ಪ್ರಮಾಣವಚನ

ಪಿಟಿಐ
Published 5 ಫೆಬ್ರುವರಿ 2023, 14:01 IST
Last Updated 5 ಫೆಬ್ರುವರಿ 2023, 14:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಸೋಮವಾರ ಐವರು ಪ್ರಮಾಣವಚನ ಸ್ವೀಕರಿಸುವರು. ಸುಪ್ರೀಂ ಕೋರ್ಟ್‌ನ ಮಂಜೂರಾಗಿರುವ ನ್ಯಾಯಮೂರ್ತಿಗಳ ಸ್ಥಾನ 34 ಆಗಿದ್ದು, ಐವರಿಂದ ಪ್ರಮಾಣವಚನ ಸ್ವೀಕರಿಸುವುದರೊಂದಿಗೆ ನ್ಯಾಯಮೂರ್ತಿಗಳ ಒಟ್ಟು ಸಂಖ್ಯೆ 32ಕ್ಕೆ ಏರಲಿದೆ.

ಪ್ರಸ್ತುತ ಕ್ರಮವಾಗಿ ರಾಜಸ್ಥಾನ, ಪಟ್ನಾ, ಮಣಿಪುರ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಾಗಿರುವ ಪಂಕಜ್‌ ಮಿಥಾಲ್‌, ಸಂಜಯ್ ಕರೋಲ್‌, ಪಿ.ವಿ.ಸಂಜಯ್‌ ಕುಮಾರ್‌ ಹಾಗೂ ಹೈಕೋರ್ಟ್‌ನ ಇಬ್ಬರು ಹಿರಿಯ ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಅಲಹಾಬಾದ್ ಹೈಕೋರ್ಟ್ ಕೇಡರ್‌ನ ನ್ಯಾಯಮೂರ್ತಿ ಮಿಥಾಲ್‌ ಈ ಪೈಕಿ ಹಿರಿಯರು. ಇವರು ಕಳೆದ ವರ್ಷ ಅಕ್ಟೋಬರ್‌ 14ರಿಂದಲೂ ರಾಜಸ್ಥಾನ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ADVERTISEMENT

ಪಟ್ನಾ ಹೈಕೋರ್ಟ್‌ನ ನ್ಯಾಯಮೂರ್ತಿ ಅಹ್ಸಾನುದ್ದೀನ್‌ ಅಮಾನುಲ್ಲಾ, ಅಲಹಾಬಾದ್‌ ಹೈಕೋರ್ಟ್‌ನ ನ್ಯಾಯಮೂರ್ತಿ ಮನೋಜ್‌ ಮಿಶ್ರಾ ಸೋಮವಾರ ಪ್ರತಿಜ್ಞಾವಿಧಿ ಸ್ವೀಕರಿಸುವ ಇನ್ನಿಬ್ಬರು ನ್ಯಾಯಮೂರ್ತಿಗಳು.

ಕೊಲಿಜಿಯಂ ಶಿಫಾರಸು: ಈ ಐವರು ನ್ಯಾಯಮೂರ್ತಿಗಳ ಹೆಸರನ್ನು ಸುಪ್ರೀಂ ಕೋರ್ಟ್‌ನ ಆರು ಸದಸ್ಯರ ಕೊಲಿಜಿಯಂ ಕಳೆದ ವರ್ಷ ಡಿಸೆಂಬರ್‌ 13ರಂದು ಶಿಫಾರಸು ಮಾಡಿತ್ತು.

ಜನವರಿ 31ರಂದು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಇನ್ನಿಬ್ಬರು ನ್ಯಾಯಮೂರ್ತಿಗಳಾದ ರಾಜೇಶ್‌ ಬಿಂದಾಲ್‌ ಮತ್ತು ಅರವಿಂದ ಕುಮಾರ್‌ ಅವರ ಹೆಸರನ್ನು ಶಿಫಾರಸು ಮಾಡಿತ್ತು. ಪ್ರಸ್ತುತ ಇರುವ 27 ನ್ಯಾಯಮೂರ್ತಿಗಳ ಪೈಕಿ ಎಂಟು ಮಂದಿ ನ್ಯಾಯಮೂರ್ತಿಗಳ ಅಧಿಕಾರವಧಿ ಇದೇ ವರ್ಷ ಅಂದರೆ 2023ರಲ್ಲಿ ಮುಗಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.