ಸುಪ್ರೀಂ ಕೋರ್ಟ್–ಪಿಟಿಐ ಚಿತ್ರ
ಗಾಂಧಿನಗರ: ವಂತಾರಾ ಮೃಗಾಲಯಕ್ಕೆ ಸಂಬಂಧಿಸಿದಂತೆ ಕಾನೂನು ಉಲ್ಲಂಘಿಸಿ ದೇಶ, ವಿದೇಶಗಳಿಂದ ಪ್ರಾಣಿಗಳನ್ನು ಸ್ವಾಧೀನಪಡಿಸಿಕೊಂಡ ಆರೋಪದಡಿ ಸಮಗ್ರ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ.
ಪ್ರಾಣಿ, ಪಕ್ಷಿಗಳ ರಕ್ಷಣೆ, ಆರೈಕೆ ಮತ್ತು ಪುನರ್ವಸತಿಗಾಗಿ ರಿಲಯನ್ಸ್ ಫೌಂಡೇಶನ್ ವಂತಾರಾ ಎಂಬ ವನ್ಯಜೀವಿ ಸಂರಕ್ಷಣೆ ಕೇಂದ್ರವನ್ನು ಗುಜರಾತ್‌ನ ಜಾಮ್‌ನಗರದಲ್ಲಿ ಸ್ಥಾಪಿಸಿದೆ.
ಮಾಧ್ಯಮಗಳು, ಸಾಮಾಜಿಕ ಜಾಲತಾಣ ಮತ್ತು ಎನ್‌ಜಿಒ ಹಾಗೂ ವನ್ಯಜೀವಿ ಸಂಸ್ಥೆಗಳಿಂದ ಬಂದ ದೂರುಗಳ ಆಧಾರದ ಮೇಲೆ ವಂತಾರಾದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದಡಿ ಎರಡು ಪಿಐಎಲ್ ಅರ್ಜಿನಗಳು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಂಕಜ್ ಮಿಥಲ್ ಮತ್ತು ಪಿ.ಬಿ ವರಾಲೆ ಅವರಿದ್ದ ಪೀಠವು ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಜೆ.ಚೆಲಮೇಶ್ವರ್ ನೇತೃತ್ವದಲ್ಲಿ ನಾಲ್ವರು ಸದಸ್ಯರ ಎಸ್‌ಐಟಿ ತಂಡವನ್ನು ರಚಿಸಿದೆ.
ಎಸ್‌ಐಟಿ ತಂಡ ನಡೆಸುವ ವಿಚಾರಣೆಯು ನ್ಯಾಯಾಲಯಕ್ಕೆ ಸತ್ಯಾಸತ್ಯತೆಯನ್ನು ತಿಳಿಯಲು ಅನುವು ಮಾಡಿಕೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ ಆದೇಶ ಹೊರಡಿಸಲಾಗವುದು ಎಂದು ನ್ಯಾಯಾಲಯ ತಿಳಿಸಿದೆ.
ನ್ಯಾಯಮೂರ್ತಿ ಜೆ.ಚೆಲಮೇಶ್ವರ್ ನೇತೃತ್ವದಲ್ಲಿ, ನಿವೃತ್ತ ನ್ಯಾಯಮೂರ್ತಿರಾಘವೇಂದ್ರ ಚೌಹಾಣ್, ಮುಂಬೈನ ಮಾಜಿ ಪೊಲೀಸ್ ಆಯುಕ್ತ ಹೇಮಂತ್ ನಾಗ್ರಾಲೆ ಮತ್ತು ಮಾಜಿ ಕಂದಾಯ ಅಧಿಕಾರಿ ಅನೀಶ್ ಗುಪ್ತಾ ಒಳಗೊಂಡ ಎಸ್‌ಐಟಿ ತಂಡವನ್ನು ಸುಪ್ರೀಂ ಕೋರ್ಟ್ ರಚಿಸಿದೆ.
ಹಣ ವರ್ಗಾವಣೆ ಸೇರಿದಂತೆ ಅರ್ಜಿಗಳಲ್ಲಿ ಮಾಡಲಾದ ಆರೋಪಗಳಿಗೆ ಸಂಬಂಧಿಸಿದ ಯಾವುದೇ ಇತರೆ ವಿಷಯದ ಕುರಿತಾದ ದೂರುಗಳನ್ನು ಎಸ್‌ಐಟಿ ಪರಿಶೀಲಿಸುತ್ತದೆ. ಸೆಪ್ಟೆಂಬರ್ 12ರೊಳಗೆ ವರದಿ ಸಲ್ಲಿಸುವಂತೆ ಎಸ್‌ಐಟಿ ತಂಡಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲ್ಲೂಕಿನ ನಾಂದಣಿ ಜೈನ ಮಂದಿರವೊಂದರಲ್ಲಿ ಸಾಕಾನೆಯಾಗಿದ್ದ ಮಹಾದೇವಿ (ಮಾಧುರಿ) ಆನೆಯನ್ನು ನಾವಾಗಲೇ ವಂತಾರಾ ಮೃಗಾಲಯಕ್ಕೆ ತರಿಸಿಕೊಂಡಿಲ್ಲ. ಕೋರಿಕೆ ಮೇರೆಗೆ ಆ ಕಾರ್ಯವನ್ನು ನಾವು ನೆರವೇರಿಸಲಾಯಿತು ಎಂದು ವಂತಾರಾ ಇತ್ತೀಚೆಗೆ ಪ್ರಕಟಣೆಯಲ್ಲಿ ತಿಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.