
ನವದೆಹಲಿ: ‘ಸಹಕಾರ ಸಂಘಗಳು ಮತ್ತು ಇತರ ಸಂಘ ಸಂಸ್ಥೆಗಳ ಆಡಳಿತದಲ್ಲಿ ‘ವಸಹಾತುಶಾಹಿ ಮನಸ್ಥಿತಿ’ ಮುಂದುವರಿದಿದೆ. ಜಿಲ್ಲಾಧಿಕಾರಿಗಳಂತಹ ಅಧಿಕಾರಿಗಳ ಸಂಗಾತಿಗಳನ್ನು ಅಧಿಕಾರೇತರ ಪಧಾದಿಕಾರಿಗಳನ್ನಾಗಿ ನೇಮಿಸಲಾಗುತ್ತಿದೆ’ ಎಂದು ಉತ್ತರ ಪ್ರದೇಶ ಸರ್ಕಾರವನ್ನು ಸುಪ್ರೀಂ ಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿತು.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರನ್ನು ಒಳಗೊಂಡ ನ್ಯಾಯಪೀಠವು, ಎರಡು ತಿಂಗಳ ಒಳಗಾಗಿ ಇದಕ್ಕೆ ಸಂಬಂಧಿಸಿದ ನಿಬಂಧನೆಗಳಿಗೆ ತಿದ್ದುಪಡಿ ತರಲು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿತು.
‘ಉತ್ತರ ಪ್ರದೇಶದ ಹಲವು ಸಹಕಾರ ಸಂಘಗಳ ಪ್ರಮುಖ ಹುದ್ದೆಗಳನ್ನು ಜಿಲ್ಲಾಧಿಕಾರಿ ಮತ್ತು ಮುಖ್ಯ ಕಾರ್ಯದರ್ಶಿಗಳ ಪತ್ನಿಯರಿಗೆ ನೀಡಲಾಗಿದೆ. ಇದು ಪ್ರಜಾಪ್ರಭುತ್ವ ಮೌಲ್ಯಗಳಿಗೆ ವಿರುದ್ಧವಾದ ನಡೆ’ ಎಂದು ಕೋರ್ಟ್ ಹೇಳಿತು.
ಬುಲಂದ್‌ಶಹರ್ ಜಿಲ್ಲೆಯ ಸಿಎಂ ಜಿಲ್ಲಾ ಮಹಿಳಾ ಸಮಿತಿ ಎಂಬ ಮಹಿಳಾ ಸ್ವಸಹಾಯ ಸಂಘಗಳ ಸಮಿತಿಯ ಅಧ್ಯಕ್ಷ ಹುದ್ದೆಗೆ ಜಿಲ್ಲಾಧಿಕಾರಿಯ ಪತ್ನಿಯನ್ನು ನೇಮಿಸಿದ್ದನ್ನು ಪ್ರಶ್ನಿಸಿ ಸಮಿತಿಯು ಕೋರ್ಟ್ ಮೆಟ್ಟಿಲೇರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.