
ನವದೆಹಲಿ: ಅರಾವಳಿ ಪರ್ವತಶ್ರೇಣಿ ಕುರಿತಾದ ಕೇಂದ್ರ ಪರಿಸರ ಸಚಿವಾಲಯದ ವ್ಯಾಖ್ಯೆಯನ್ನು ಅಂಗೀಕರಿಸಿ ನವೆಂಬರ್ 20ರಂದು ತಾನು ನೀಡಿದ ನಿರ್ದೇಶನಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ಅಮಾನತಿನಲ್ಲಿರಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೆ.ಕೆ.ಮಾಹೇಶ್ವರಿ ಮತ್ತು ಆಗಸ್ಟಿನ್ ಜಾರ್ಜ್ ಮಸೀಹ್ ಅವರ ರಜಾಕಾಲದ ಪೀಠವು ಈ ವಿಷಯದ ಬಗ್ಗೆ ಅಧ್ಯಯನ ನಡೆಸಲು ತಜ್ಞರನ್ನೊಳಗೊಂಡ ಉನ್ನತಾಧಿಕಾರ ಸಮಿತಿ ರಚಿಸಲು ನಿರ್ದೇಶನ ನೀಡಿತು.
ಹಿಂದೆ ನೀಡಿದ್ದ ತೀರ್ಪನ್ನು ಮರುಪರಿಶೀಲಿಸಬೇಕೆಂಬ ಬೇಡಿಕೆಗಳು ಬಂದ ಕಾರಣ ಸುಪ್ರೀಂ ಕೋರ್ಟ್ ಈ ವಿಚಾರವನ್ನು ಸ್ವಯಂ ಪ್ರೇರಿತವಾಗಿ ಪರಿಗಣಿಸಿ ಈ ಆದೇಶ ನೀಡಿದೆ.
ಅರಾವಳಿ ಪರ್ವತಶ್ರೇಣಿ ಬಗೆಗಿನ ವಿಚಾರದಲ್ಲಿ ಇನ್ನಷ್ಟು ಸ್ಪಷ್ಟತೆಯ ಅಗತ್ಯವಿದೆ ಎಂದು ಹೇಳಿದ ಪೀಠ, ಕೇಂದ್ರ ಸರ್ಕಾರ ಮತ್ತು ಸಂಬಂಧಪಟ್ಟ ಇತರರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಜನವರಿ 21ಕ್ಕೆ ಮುಂದೂಡಿತು.
ಅರಾವಳಿ ಪರ್ವತಶ್ರೇಣಿ ಕುರಿತಾದ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಸಮಿತಿ ನೀಡಿದ್ದ ಎಲ್ಲೆಡೆಯೂ ಏಕರೂಪದಲ್ಲಿ ಅನ್ವಯ ಆಗುತ್ತಿದ್ದ ವ್ಯಾಖ್ಯಾನವನ್ನು ಸುಪ್ರೀಂ ಕೋರ್ಟ್ ನವೆಂಬರ್ 20ರಂದು ಅನುಮೋದಿಸಿತ್ತು. ಆದರೆ, ತಜ್ಞರ ವರದಿ ಬರುವವರೆಗೂ ಹರಿಯಾಣ, ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಲ್ಲಿ ಹೊಸದಾಗಿ ಗಣಿಗಾರಿಕೆ ಕೈಗೊಳ್ಳಲು ಅನುಮತಿ ನೀಡುವುದಕ್ಕೆ ನಿರ್ಬಂಧ ಹೇರಿತ್ತು.
ರಾಜಸ್ಥಾನ, ಗುಜರಾತ್, ಹರಿಯಾಣದ ಅರಾವಳಿ ಜಿಲ್ಲೆಗಳಲ್ಲಿನ ನೂರು ಮೀಟರ್ ಮತ್ತು ಅದಕ್ಕಿಂತ ಎತ್ತರದ ಭೂಪ್ರದೇಶಗಳನ್ನು ಅರಾವಳಿ ಬೆಟ್ಟಗಳು ಮತ್ತು 500 ಮೀಟರ್ ಅಂತರದಲ್ಲಿರುವ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಬೆಟ್ಟಗಳನ್ನು ಅರಾವಳಿ ಶ್ರೇಣಿಗಳೆಂದು ಪರಿಗಣಿಸಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು.
ಪರಿಸರ ಸಚಿವಾಲಯದ ವ್ಯಾಖ್ಯಾನವನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿರುವುದು ರಾಜಸ್ಥಾನ ಮತ್ತು ಹರಿಯಾಣದಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ. ಅರಾವಳಿ ವ್ಯಾಪ್ತಿಯ ನೂರು ಮೀಟರ್‌ಗಿಂತ ಕಡಿಮೆ ಎತ್ತರದ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಮಾನವ ಹಸ್ತಕ್ಷೇಪ ನಡೆದು ಪರಿಸರಕ್ಕೆ ಹಾನಿಯಾಗುತ್ತದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.
ಪೀಠ ಹೇಳಿದ್ದು...
* ನೂರು ಮೀಟರ್ ಅಥವಾ ಇನ್ನೂ ಎತ್ತರದ ಭೂರಚನೆಗಳನ್ನಷ್ಟೇ ಅರಾವಳಿ ಶ್ರೇಣಿಯಲ್ಲಿನ ಸಂರಕ್ಷಿತ ಪ್ರದೇಶಗಳಾಗಿ ಗುರುತಿಸಬಹುದು ಎಂಬ ಪರಿಸರ ಸಚಿವಾಲಯದ ಸಮಿತಿಯ ಶಿಫಾರಸಿನಲ್ಲಿರುವ ‘ಗೊಂದಲ’ ಬಗೆಹರಿಸಬೇಕು
* ಸಮಿತಿಯ ಹಿಂದಿನ ವರದಿಯು ‘ಕೆಲವು ನಿರ್ಣಾಯಕ ವಿಷಯಗಳ ಬಗ್ಗೆ ಸ್ಪಷ್ಟ ನಿರ್ಧಾರ’ ತೆಗೆದುಕೊಳ್ಳಲು ವಿಫಲವಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ. ‘ಅಂತಹ ವಿಷಯಗಳ ಬಗ್ಗೆ ಹೆಚ್ಚಿನ ಅಧ್ಯಯನ’ದ ಅಗತ್ಯವಿದೆ.
* ಅರಾವಳಿ ಪ್ರದೇಶದ ಪರಿಸರ ಸಮಗ್ರತೆಗೆ ಧಕ್ಕೆ ಉಂಟುಮಾಡುವ ಯಾವುದೇ ಲೋಪವು ಕಾನೂನಿನಲ್ಲಿ ಇಲ್ಲದಂತೆ ನೋಡಿಕೊಳ್ಳಬೇಕಿದೆ
* ಹೊಸ ವ್ಯಾಖ್ಯಾನ ಮತ್ತು ಈ ನ್ಯಾಯಾಲಯದ ನಿರ್ದೇಶನಗಳನ್ನು ತಪ್ಪಾಗಿ ಅರ್ಥೈಸುವ ಹಾಗೂ ಅಸಮರ್ಪಕ ಅನುಷ್ಠಾನದ ಸಂಭಾವ್ಯತೆಯ ಬಗ್ಗೆ ಪರಿಸರವಾದಿಗಳಲ್ಲಿ ಆಕ್ರೋಶವಿದೆ
ಪರಿಸರ ಸಚಿವರ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ
ಅರಾವಳಿ ಶ್ರೇಣಿಯ ಹೊಸ ವ್ಯಾಖ್ಯಾನವನ್ನು ಅಮಾನತಿನಲ್ಲಿರಿಸುವ ಸುಪ್ರೀಂ ಕೋರ್ಟ್‌ನ ನಿರ್ಧಾರವನ್ನು ಕಾಂಗ್ರೆಸ್ ಸೋಮವಾರ ಸ್ವಾಗತಿಸಿದ್ದು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರ ರಾಜೀನಾಮೆಗೆ ಆಗ್ರಹಿಸಿದೆ. ‘ಮರು ವ್ಯಾಖ್ಯಾನದ ಪರವಾಗಿ ಪರಿಸರ ಸಚಿವರು ನೀಡುತ್ತಿದ್ದ ಎಲ್ಲ ಸಮರ್ಥನೆಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಆದ್ದರಿಂದ ಸಚಿವರು ತಕ್ಷಣವೇ ರಾಜೀನಾಮೆ ನೀಡಬೇಕು’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಈಗ ತಾತ್ಕಾಲಿಕ ಪರಿಹಾರ ಸಿಕ್ಕಿದೆಯಷ್ಟೆ. ಆದರೆ ಗಣಿಗಾರಿಕೆ ರಿಯಲ್ ಎಸ್ಟೇಟ್ ಮತ್ತು ಇತರ ವಾಣಿಜ್ಯ ಚಟುವಟಿಕೆಗಳಿಗೆ ಅರಾವಳಿ ಪರ್ವತಶ್ರೇಣಿಯನ್ನು ಬಿಟ್ಟುಕೊಡುವ ನರೇಂದ್ರ ಮೋದಿ ಸರ್ಕಾರದ ಕುತಂತ್ರದ ವಿರುದ್ಧ ತೀವ್ರ ಹೋರಾಟ ಮುಂದುವರಿಯಲಿದೆ. ಸುಪ್ರೀಂ ಕೋರ್ಟ್ ನಿರ್ಧಾರವು ಈ ನಿಟ್ಟಿನಲ್ಲಿ ಭರವಸೆಯ ಬೆಳಕಾಗಿದೆ’ ಎಂದಿದ್ದಾರೆ.
ನಿರ್ಧಾರ ಸ್ವಾಗತಿಸುವೆ: ಭೂಪೇಂದರ್
ಸುಪ್ರೀಂ ಕೋರ್ಟ್ ನಿರ್ಧಾರವನ್ನು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಸ್ವಾಗತಿಸಿದ್ದು ‘ಅರಾವಳಿ ಪರ್ವತಶ್ರೇಣಿಯ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ’ ಎಂದು ಹೇಳಿದ್ದಾರೆ. ‘ಸುಪ್ರೀಂ ಕೋರ್ಟ್ ತನ್ನ ನಿರ್ದೇಶನಗಳನ್ನು ಅಮಾನತಿನಲ್ಲಿರಿಸಿರುವುದು ಮತ್ತು ಈ ಕುರಿತು ಅಧ್ಯಯನ ಕೈಗೊಳ್ಳಲು ಹೊಸ ಸಮಿತಿಯ ರಚನೆಗೆ ನಿರ್ದೇಶಿಸಿರುವುದನ್ನು ನಾನು ಸ್ವಾಗತಿಸುತ್ತೇನೆ. ಅರಾವಳಿ ಪರ್ವತಶ್ರೇಣಿಯ ಸಂರಕ್ಷಣೆ ಮತ್ತು ಮರುಸ್ಥಾಪನೆಯ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲ ನೆರವು ನೀಡಲು ಪರಿಸರ ಸಚಿವಾಲಯ ಬದ್ಧವಾಗಿದೆ’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಈ ಪ್ರದೇಶದಲ್ಲಿ ಹೊಸ ಗಣಿಗಾರಿಕೆಗೆ ಅವಕಾಶ ನೀಡುವುದು ಅಥವಾ ಹಳೆಯ ಗಣಿಗಾರಿಕೆ ಗುತ್ತಿಗೆಗಳ ನವೀಕರಣಕ್ಕೆ ಸಂಬಂಧಿಸಿದಂತೆ ಹೇರಿರುವ ಸಂಪೂರ್ಣ ನಿಷೇಧ ಮುಂದುವರಿಯಲಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.