ADVERTISEMENT

ಶ್ವಾನದ ಮನಸ್ಸನ್ನು ಯಾರೂ ಅರ್ಥಮಾಡಿಕೊಳ್ಳಲಾರರು: ಸುಪ್ರೀಂ ಕೋರ್ಟ್

ಪಿಟಿಐ
Published 7 ಜನವರಿ 2026, 15:56 IST
Last Updated 7 ಜನವರಿ 2026, 15:56 IST
<div class="paragraphs"><p>ಸುಪ್ರೀಂ ಕೋರ್ಟ್‌ ಹಾಗೂ ಬೀದಿ ನಾಯಿಗಳು</p></div>

ಸುಪ್ರೀಂ ಕೋರ್ಟ್‌ ಹಾಗೂ ಬೀದಿ ನಾಯಿಗಳು

   

ನವದೆಹಲಿ: ‘ನಾಯಿಯ ಮನಸ್ಸನ್ನು ಅರಿಯಲು ಯಾರಿಂದಲೂ ಸಾಧ್ಯವಿಲ್ಲ. ಅದು ಕಚ್ಚುತ್ತದೆಯೋ ಅಥವಾ ಕಚ್ಚದೆ ಸುಮ್ಮನಿರುತ್ತದೆಯೋ ಎನ್ನುವುದರ ಕುರಿತು ಭವಿಷ್ಯ ನುಡಿಯಲು ಆಗುವುದಿಲ್ಲ. ನಾಯಿಯ ಮನಃಸ್ಥಿತಿ ಅಧ್ಯಯನ ಮಾಡುವುದಕ್ಕಿಂತ ಮುಖ್ಯವಾಗಿ, ರಸ್ತೆಗಳನ್ನು, ಬೀದಿಗಳನ್ನು ಶ್ವಾನಗಳಿಂದ ಮುಕ್ತವಾಗಿರಿಸಬೇಕು. ಬೀದಿ ನಾಯಿಗಳ ವಿಷಯದಲ್ಲಿ ಚಿಕಿತ್ಸೆಗಿಂತ ಮುನ್ನೆಚ್ಚರಿಕೆಯೇ ಮದ್ದು’ ಎಂದು ಸುಪ್ರೀಂ ಕೋರ್ಟ್‌ ಪುನರುಚ್ಚರಿಸಿದೆ.

ಬೀದಿ ನಾಯಿಗಳಿಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಪ್ರಕರಣದ ವಿಚಾರಣೆಯನ್ನು ಬುಧವಾರ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಂನಾಥ್‌, ಸಂದೀಪ್‌ ಮೆಹ್ತಾ ಮತ್ತು ಎನ್‌.ವಿ ಅಂಜಾರಿಯಾ ಅವರನ್ನೊಳಗೊಂಡ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ. 

ADVERTISEMENT

‘ಯಾವ ನಾಯಿ, ಬೆಳಿಗ್ಗೆ ಯಾವ ಮೂಡ್‌ನಲ್ಲಿ ಇರುತ್ತದೆ ಎನ್ನುವುದನ್ನು ನೀವು ಹೇಗೆ ನಿರ್ಧರಿಸುತ್ತೀರಿ’ ಎಂದು ನ್ಯಾಯ‍ಪೀಠವು ಪ್ರಾಣಿಗಳ ಹಕ್ಕುಗಳ ಸಂಘಟನೆ ಪರವಾಗಿ ಹಾಜರಾದ ವಕೀಲ ಕಪಿಲ್ ಸಿಬಲ್‌ ಅವರನ್ನು ಪ್ರಶ್ನಿಸಿತು. 

‘ದ್ವಿಚಕ್ರ ವಾಹನ ಅಥವಾ ಬೈಸಿಕಲ್‌ನಲ್ಲಿ ಹೋಗುವಾಗ ಬೀದಿ ನಾಯಿ ವ್ಯಕ್ತಿಯನ್ನು ಕಚ್ಚಬಹುದು ಅಥವಾ ಬೆನ್ನಟ್ಟಬಹುದು. ಇದರಿಂದ ಆ ವ್ಯಕ್ತಿ ವಾಹನದಿಂದ ಕೆಳಗೆ ಬೀಳುವ ಅಥವಾ ಅಪಘಾತ ಸಂಭವಿಸುವ ಅಪಾಯ ಇರುತ್ತದೆ. ರಸ್ತೆಯಲ್ಲಿ ಬೀದಿ ನಾಯಿಗಳಿಲ್ಲ ಎನ್ನುವುದು ಖಾತ್ರಿ ಇದ್ದರೆ ಆ ಮಾರ್ಗದಲ್ಲಿ ಧೈರ್ಯದಿಂದ ಹೋಗಬಹುದು. ನಾಯಿಗಳು ದಾಳಿ ಮಾಡುವುದರಿಂದ ಮಾತ್ರವಲ್ಲ, ದಿಢೀರ್‌ ರಸ್ತೆಗೆ ನುಗ್ಗುವುದರಿಂದಲೂ ಅಪಘಾತಗಳು ಸಂಭವಿಸಿ ಜೀವಹಾನಿ ಸಂಭವಿಸುತ್ತದೆ. ಹಾಗಾಗಿ ರಸ್ತೆಗಳನ್ನು ನಾಯಿಗಳಿಂದ ಮುಕ್ತವಾಗಿಸುವುದೇ ಈ ಸಮಸ್ಯೆಗೆ ಪರಿಹಾರ’ ಎಂದು ನ್ಯಾಯಪೀಠ ಒತ್ತಿ ಹೇಳಿತು. 

‘ನಾನು ಹಿಂದೆ  ವಿಶ್ವವಿದ್ಯಾಲಯದಲ್ಲಿದ್ದಾಗ ಅಲ್ಲಿ ನಾಯಿಗಳಿದ್ದವು, ಆದರೆ, ಯಾವುದೂ ಕಚ್ಚುತ್ತಿರಲಿಲ್ಲ. ಈಗಲೂ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಆವರಣದಲ್ಲಿ ನಾಯಿಗಳಿವೆ’ ಎಂದು ಕಪಿಲ್ ಸಿಬಲ್‌ ಪೀಠದ ಗಮನಕ್ಕೆ ತಂದರು.  

‘ನಿಮ್ಮ ಮಾಹಿತಿ ಹಳೆಯದು’ ಎಂದ ಪೀಠ, ‘ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯೂನಿವರ್ಸಿಟಿ  (ಎನ್‌ಎಲ್‌ಎಸ್‌ಐಯು) ಆವರಣದಲ್ಲಿ ಬೀದಿ ನಾಯಿಗಳಿಂದ ದಾಳಿ ನಡೆದಿರುವ ಹಲವು ಪ್ರಕರಣಗಳು ವರದಿಯಾಗಿವೆ’ ಎಂದು ಹೇಳಿತು.

‘ಸಂಘ ಸಂಸ್ಥೆಗಳ  ಆವರಣವನ್ನು ಬೀದಿ ಎಂದು ಹೇಳಲಾಗದು. ಆದರೆ, ನಿಮಗೆ ಕೋರ್ಟ್‌ ಆವರಣದಲ್ಲಿ, ವಿಶ್ವವಿದ್ಯಾಲಯದಲ್ಲಿ, ಆಸ್ಪತ್ರೆಯಲ್ಲಿ, ಬಸ್‌ ನಿಲ್ದಾಣದಲ್ಲಿ ನಾಯಿಗಳು ಯಾಕೆ ಬೇಕು’ ಎಂದು ಪೀಠ ಪ್ರಶ್ನಿಸಿತು.

‘ನಾಯಿಯನ್ನು ಎಲ್ಲಿಂದ ಸೆರೆ ಹಿಡಿಯಲಾಗಿದೆಯೇ ವಾಪಸ್‌ ಅಲ್ಲಿಯೇ ಅವುಗಳನ್ನು ಬಿಡಬೇಕು ಎನ್ನುತ್ತದೆ ನಿಯಮ. ಹಾಗಿದ್ದರೆ, ಸಂಘ ಸಂಸ್ಥೆಗಳ ಆವರಣವನ್ನು ನಾಯಿಗಳಿಂದ ಮುಕ್ತವಾಗಿಸುವುದು ಹೇಗೆ? ಇಲ್ಲಿಂದ ಸೆರೆ ಹಿಡಿದ ನಾಯಿಗಳನ್ನು ಬೀದಿಗೆ ತಂದು ಬಿಡುತ್ತೀರಾ’ ಎಂದು ಪೀಠ ಪ್ರಶ್ನಿಸಿತು.

‘ಪರಿಣಾಮಕಾರಿ ವಿಧಾನ ರೂಪಿಸಿ’

‘ಬೀದಿ ನಾಯಿಗಳನ್ನು ಸ್ಥಳಾಂತರಿಸಿ, ಅವುಗಳನ್ನು ಹೊಡೆದುರುಳಿಸಿ, ರಸ್ತೆಗಳನ್ನು ನಾಯಿಗಳಿಂದ ಮುಕ್ತವಾಗಿಸಿ’ ಎಂದು ಯಾರೊಬ್ಬರೂ ಹೇಳುತ್ತಿಲ್ಲ’ ಎಂದು ಹೇಳಿದ ಪೀಠವು, ‘ಸಾರ್ವಜನಿಕರಿಗೆ ನಾಯಿ ಕಡಿತದಿಂದ ರಕ್ಷಣೆ ಒದಗಿಸಲು ಪರಿಣಾಮಕಾರಿ ವಿಧಾನವೊಂದನ್ನು ರೂಪಿಸಬೇಕು. ಇದಕ್ಕಾಗಿ ಸ್ಥಳೀಯ ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು (ಎಸ್‌ಒಪಿ) ಜಾರಿಗೊಳಿಸಲಾಗುವುದು’ ಎಂದಿತು.

‘ಎಲ್ಲ ಬೀದಿ ನಾಯಿಗಳಿಗೆ ಆಶ್ರಯ ಒದಗಿಸುವುದು ಈ ಸಮಸ್ಯೆಗೆ ಪರಿಹಾರ ಅಲ್ಲ. ಇದು ಭೌತಿಕವಾಗಿ ಸಾಧ್ಯವಿಲ್ಲ. ಆರ್ಥಿಕವಾಗಿಯೂ ಅಸಾಧ್ಯ. ವೈಜ್ಞಾನಿಕ ರೀತಿಯಲ್ಲಿ ಇದಕ್ಕೆ ಪರಿಹಾರ ಹುಡುಕಬೇಕು’ ಎಂದು ಸಿಬಲ್‌ ಹೇಳಿದರು.  

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ,  ‘ನಾಯಿಗಳನ್ನು ಪಳಗಿಸುವ ಕೇಂದ್ರಗಳಿಗೆ ಕಳುಹಿಸಿ, ಮತ್ತೆ ಅವು ಜನರನ್ನು ಕಚ್ಚದಂತೆ ಮಾಡಿ, ವಾಪಸ್‌ ತಂದುಬಿಡುವುದೊಂದೇ ಉಳಿದಿರುವ ಪರಿಹಾರ’ ಎಂದು ಪ್ರತಿಕ್ರಿಯಿಸಿತು.

ಎನ್‌ಎಚ್‌ಎಐ ವಿರುದ್ಧ ಅಸಮಾಧಾನ
ಹೆದ್ದಾರಿಯಿಂದ ನಾಯಿಗಳನ್ನು ತೆರವುಗೊಳಿಸುವ ಹೊಣೆಗಾರಿಕೆಯನ್ನು ರಾಜ್ಯಗಳ ಮೇಲೆ ಹೊರಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಕ್ರಮಕ್ಕೆ ಸುಪ್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತು. ‘ದೇಶದಲ್ಲಿ ಜನರು ಸಾಯುತ್ತಿರುವುದು ನಾಯಿ ಕಡಿತದಿಂದ ಮಾತ್ರ ಅಲ್ಲ. ರಸ್ತೆಗಳಲ್ಲಿ ಇತರೆ ಪ್ರಾಣಿಗಳಿಂದ ಉಂಟಾಗುವ ಅಪಘಾತಗಳಿಂದಲೂ ಜೀವ ಹಾನಿ ಸಂಭವಿಸುತ್ತಿದೆ. ಕಳೆದ 20 ದಿನಗಳಲ್ಲಿ ಇಬ್ಬರು ನ್ಯಾಯಮೂರ್ತಿಗಳು ಪ್ರಾಣಿಗಳಿಂದಾಗಿ ಹೆದ್ದಾರಿಗಳಲ್ಲಿ ಅಪಘಾತಕ್ಕೆ ಒಳಗಾಗಿದ್ದಾರೆ’ ಎಂದು ಹೇಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.