ADVERTISEMENT

ಹುದ್ದೆ, ಸ್ವಾತಂತ್ರ್ಯದ ನಡುವೆ ಯಾವುದು ಬೇಕು?: ಬಾಲಾಜಿಗೆ ಸುಪ್ರೀಂ ಕೋರ್ಟ್‌

ತಮಿಳುನಾಡಿನ ಸಚಿವ ಬಾಲಾಜಿಗೆ ಸುಪ್ರೀಂ ಕೋರ್ಟ್‌ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 15:13 IST
Last Updated 23 ಏಪ್ರಿಲ್ 2025, 15:13 IST
court
court   

ನವದೆಹಲಿ: ‘ಹುದ್ದೆ ಮತ್ತು ಸ್ವಾತಂತ್ರ್ಯದ’ ನಡುವೆ ತಮ್ಮ ಆಯ್ಕೆ ಯಾವುದು ಎಂಬುದನ್ನು ತೀರ್ಮಾನಿಸುವಂತೆ ತಮಿಳುನಾಡಿನ ಸಚಿವ ವಿ. ಸೆಂಥಿಲ್ ಬಾಲಾಜಿ ಅವರಿಗೆ ಸುಪ್ರೀಂ ಕೋರ್ಟ್‌ ಬುಧವಾರ ಸೂಚಿಸಿದೆ.

ತಮಿಳುನಾಡಿನ ಸಚಿವ ಸ್ಥಾನದಿಂದ ಕೆಳಗಿಳಿಯದೆ ಇದ್ದರೆ ಜಾಮೀನು ರದ್ದು ಮಾಡುವುದಾಗಿ ಅದು ಬಾಲಾಜಿ ಅವರಿಗೆ ಎಚ್ಚರಿಕೆ ನೀಡಿದೆ.

‘ಉದ್ಯೋಗಕ್ಕೆ ಹಣ’ ಹಗರಣಕ್ಕೆ ಸಂಬಂಧಿಸಿದ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ಪಡೆದ ಕೆಲವೇ ದಿನಗಳಲ್ಲಿ ಬಾಲಾಜಿ ಅವರನ್ನು ಸಚಿವರನ್ನಾಗಿ ಪುನಃ ನೇಮಕ ಮಾಡಿದ್ದಕ್ಕೆ ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕ ಮತ್ತು ಆಗಸ್ಟೀನ್ ಜಾರ್ಜ್‌ ಮಸೀಹ್ ಅವರು ಇರುವ ವಿಭಾಗೀಯ ಪೀಠವು ಅಸಮಾಧಾನ ವ್ಯಕ್ತಪಡಿಸಿತು.

ADVERTISEMENT

‘ನೀವು ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತೀರಿ, ಹಸ್ತಕ್ಷೇಪ ನಡೆಸುತ್ತೀರಿ ಎಂಬ ಗಂಭೀರ ಆತಂಕ ಇದೆ. ಸಚಿವ ಸ್ಥಾನ ಹಾಗೂ ಸ್ವಾತಂತ್ರ್ಯದ ಪೈಕಿ ನಿಮ್ಮ ಆಯ್ಕೆ ಯಾವುದು ಎಂಬುದನ್ನು ತೀರ್ಮಾನಿಸಬೇಕು. ಆಯ್ಕೆ ಯಾವುದು ಎಂಬುದನ್ನು ನೀವು ನಮಗೆ ತಿಳಿಸಬೇಕು’ ಎಂದು ಪೀಠವು ಹೇಳಿತು.

ಬಾಲಾಜಿ ಅವರು ತಮ್ಮ ವಿರುದ್ಧ ದೂರು ನೀಡಿದ್ದವರು ಅದನ್ನು ಹಿಂಪಡೆಯುವಂತೆ ಬಲವಂತ ಮಾಡಿದ್ದರು ಎಂಬುದನ್ನು ದಾಖಲಿಸಿಕೊಂಡಿರುವ ಹಿಂದಿನ ಆದೇಶವೊಂದನ್ನು ಪೀಠವು ಉಲ್ಲೇಖಿಸಿತು. ಜಾಮೀನು ಕೊಡಲಾಗಿದೆ ಎಂದಮಾತ್ರಕ್ಕೆ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಅಧಿಕಾರ ನೀಡಲಾಗಿದೆ ಎಂದಲ್ಲ ಎಂಬುದನ್ನು ಪೀಠವು ಹೇಳಿತು.

ಪ್ರಕರಣದ ಸಾಕ್ಷಿಗಳ ಮೇಲೆ ಬಾಲಾಜಿ ಅವರು ಪ್ರಭಾವ ಬೀರಿದ್ದಾರೆ, ಅವರ ಜಾಮೀನು ರದ್ದುಪಡಿಸಬೇಕು ಎಂಬ ಅರ್ಜಿಯ ವಿಚಾರಣೆಯನ್ನು ಪೀಠವು ನಡೆಸುತ್ತಿದೆ. ಬಾಲಾಜಿ ಅವರ ಹಿಂದಿನ ವರ್ತನೆಗಳು ಅವರು ‘ಪ್ರಭಾವ ಬೀರಿದ್ದನ್ನು, ಹಸ್ತಕ್ಷೇಪ ನಡೆಸಿದ್ದನ್ನು’ ತೋರಿಸಿವೆ. ಅವರ ವಿರುದ್ಧದ ಆರೋಪಗಳಲ್ಲಿ ಮೇಲ್ನೋಟಕ್ಕೆ ಹುರುಳಿದೆ ಎಂದು ಪೀಠವು ಹೇಳಿತು.

‘ನೀವು ಈಗ ಮೊದಲಿನ ಸ್ಥಾನಕ್ಕೆ ಬಂದಿದ್ದೀರಿ, ಸಚಿವರಾಗಿ ನೀವು ಪ್ರಭಾವ ಬೀರಬಹುದು. ನಿಮಗೆ ಜಾಮೀನು ನೀಡಿದ್ದು ಸಂಪೂರ್ಣವಾಗಿ ಭಿನ್ನವಾದ ನೆಲೆಯಲ್ಲಿ... ಪ್ರಕರಣದ ಸತ್ಯಾಸತ್ಯತೆ ಆಧರಿಸಿ ಜಾಮೀನು ಕೊಟ್ಟಿದ್ದಲ್ಲ...’ ಎಂದು ಪೀಠವು ಹೇಳಿತು.

‘ನಿಮ್ಮ ವಿರುದ್ಧದ ಆದೇಶಗಳನ್ನು ನಿರ್ಲಕ್ಷಿಸುವ ಮೂಲಕ ನಾವು ತಪ್ಪು ಮಾಡಿದೆವು ಎಂಬುದನ್ನು ನಾವು ಆದೇಶದಲ್ಲಿ ಉಲ್ಲೇಖಿಸುತ್ತೇವೆ. ಏಕೆಂದರೆ, ನೀವು ಸಚಿವರಾಗಿ ಇಲ್ಲ ಎಂಬ ನೆಲೆಯಲ್ಲಿ ಇಡೀ ವಿಚಾರಣೆ ಮುಂದುವರೆದಿತ್ತು. ನಾವು ನಮ್ಮ ತಪ್ಪು ಒಪ್ಪಿಕೊಳ್ಳುತ್ತೇವೆ’ ಎಂದು ನ್ಯಾಯಮೂರ್ತಿ ಓಕ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.