ಶ್ವಾನ
ಐಸ್ಟಾಕ್ ಚಿತ್ರ
ಬುಲಂದ್‌ಶಹರ್: ಸುಪ್ರೀಂ ಕೋರ್ಟ್‌ನ ಆದೇಶದಂತೆ ಈಗಾಗಲೇ ಹಿಡಿದು ಆಶ್ರಯ ತಾಣಗಳಲ್ಲಿ ಇಡಲಾಗಿದ್ದ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿ, ಲಸಿಕೆ ನೀಡಿ ಬಿಡುಗಡೆ ಮಾಡಲು ಸ್ಥಳೀಯ ಪಾಲಿಕೆ ಸಿದ್ಧತೆ ನಡೆಸಿದೆ. ಮತ್ತೊಂದೆಡೆ ಸುಪ್ರೀಂ ಕೋರ್ಟ್‌ನ ಮಾರ್ಪಾಡು ಆದೇಶಕ್ಕೆ ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ.
ಕಬಡ್ಡಿ ಆಟಗಾರ ಬ್ರಿಜೇಟ್ ಸೋಲಂಕಿ (22) ಅವರಿಗೆ ಬೀದಿಯಲ್ಲಿದ್ದ ಪುಟ್ಟ ನಾಯಿ ಮರಿಯೊಂದು ಕಚ್ಚಿತ್ತು. ಬೆರಳಿಗೆ ಆಗಿದ್ದ ಗಾಯವನ್ನು ಅವರು ನಿರ್ಲಕ್ಷಿಸಿದ್ದರು. ಎರಡು ತಿಂಗಳ ನಂತರ ಅವರಲ್ಲಿ ಸೋಂಕು ಹೆಚ್ಚಾಗಿ ಮೃತಪಟ್ಟಿದ್ದರು.
ಸುಪ್ರೀಂ ಕೋರ್ಟ್‌ನ ತೀರ್ಪನ್ನು ಸೋಲಂಕಿ ಅವರ ಕುಟುಂಬ ಸ್ವಾಗತಿಸಿದೆ. ‘ಬೀದಿ ನಾಯಿಗಳನ್ನು ನಿಯಂತ್ರಿಸುವ ಸುಪ್ರೀಂ ಕೋರ್ಟ್‌ನ ನಿರ್ದೇಶನ ಸ್ವಾಗತಾರ್ಹ. ಇಂಥ ಕ್ರಮಗಳಿಂದ ನಮ್ಮಂತೆ ಇತರರು ಸಮಸ್ಯೆಗೆ ಸಿಲುಕುವುದು ತಪ್ಪಲಿದೆ’ ಎಂದಿದ್ದಾರೆ.
ಸುಪ್ರೀಂ ಕೋರ್ಟ್‌ನ ತೀರ್ಪನ್ನು ಸ್ವಾಗತಿಸಿರುವ ವಾರಾಣಸಿ ದೇವಾಲಯದ ಪ್ರಧಾನ ಅರ್ಚಕ ಮಹಾಂತ ಜಿತೇಂದ್ರ ಮೋಹನ ಪುರಿ, ಶ್ವಾನವು ಧಾರ್ಮಿಕ ಮತ್ತು ಸಾಂಸ್ಕೃತಿ ಮಹತ್ವ ಪಡೆದುಕೊಂಡಿದೆ ಎಂದಿದ್ದಾರೆ.
‘ಸನಾತನ ಧರ್ಮದಲ್ಲಿ ಶ್ವಾನವು ಕಲಿಯುಗದ ದೇವರು ಭೈರವನ ವಾಹನ. ನಮ್ಮ ದೇವಾಲಯದಲ್ಲಿ 12 ಶ್ವಾನಗಳಿದ್ದು, ನಿತ್ಯ ಆರತಿಯಲ್ಲಿ ಪಾಲ್ಗೊಂಡು ಶಂಖನಾದದಂತೆ ಶಬ್ದ ಮೊಳಗಿಸುತ್ತಿವೆ’ ಎಂದಿದ್ದಾರೆ.
‘ಯಾರೋ ಒಬ್ಬ ಮಾನಸಿಕ ಅಸ್ವಸ್ಥ ವ್ಯಕ್ತಿ ಅಸಭ್ಯವಾಗಿ ವರ್ತಿಸಿದನೆಂದರೆ ಇಡೀ ಮನುಕುಲಕ್ಕೆ ಶಿಕ್ಷೆ ನೀಡುವುದು ಸರಿಯಲ್ಲ. ಇದೇ ತತ್ವವನ್ನು ನಾಯಿಗಳಿಗೂ ಅನ್ವಯಿಸಬೇಕು. ಕಳ್ಳರು ಮತ್ತು ಅಪಾಯಗಳಿಂದ ಊರು, ಕೇರಿ ಹಾಗೂ ಮನೆಗಳನ್ನು ರಕ್ಷಿಸಲಿದೆ. ಪ್ರಾಚೀನ ಕಾಲದಿಂದಲೂ ಶ್ವಾನ ಮತ್ತು ಹಸುಗಳನ್ನು ಮನುಷ್ಯರ ಜತೆಗಾರರು ಎಂದು ಪರಿಗಣಿಸಲಾಗುತ್ತಿದೆ. ಅವುಗಳಿಗೂ ಗೌರವ ಸಿಗಬೇಕು ಮತ್ತು ರಾಷ್ಟ್ರೀಯ ಮನ್ನಣೆಯೂ ಲಭಿಸಬೇಕು’ ಎಂದು ಆಗ್ರಹಿಸಿದ್ದಾರೆ.
‘ಸುಪ್ರೀಂ ಕೋರ್ಟ್‌ನ ತೀರ್ಪಿಗೆ ಅನುಗುಣವಾಗಿ ಸರ್ಕಾರ ಯಾವ ರೀತಿಯ ಆದೇಶ ಮಾಡುತ್ತದೋ ಅದನ್ನು ಅನುಷ್ಠಾನಗೊಳಿಸಲಾಗುವುದು. ಸುಪ್ರೀಂ ಕೋರ್ಟ್‌ನ ಆದೇಶವನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಲಾಗುವುದು’ ಎಂದು ಗಾಝಿಯಾಬಾದ್ ಮೇಯರ್ ಸುನೀತಾ ದಯಾಳ್ ಹೇಳಿದ್ದಾರೆ.
ದೆಹಲಿ ಮತ್ತು ಎನ್‌ಸಿಆರ್ ಪ್ರದೇಶದಲ್ಲಿರುವ ಬೀದಿ ನಾಯಿಗಳನ್ನು ಹಿಡಿದು ಆಶ್ರಯತಾಣಗಳಿಗೆ ಕಳುಹಿಸುವಂತೆ ಆ. 11ರ ತನ್ನ ಆದೇಶವನ್ನೇ ಮಾರ್ಪಾಡು ಮಾಡಿರುವ ಸುಪ್ರೀಂ ಕೋರ್ಟ್, ಶುಕ್ರವಾರ ಹೊಸ ಆದೇಶ ಪ್ರಕಟಿಸಿದೆ.
ದೆಹಲಿ ಹಾಗೂ ಎನ್‌ಸಿಆರ್‌ನಲ್ಲಿರುವ ಬೀದಿ ನಾಯಿಗಳನ್ನು ಹಿಡಿದು ಅವುಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆಸಬೇಕು. ರೇಬಿಸ್ ನಿರೋಧಕ ಚುಚ್ಚುಮದ್ದು ನೀಡಬೇಕು. ಒಂದೊಮ್ಮೆ ಅವುಗಳಿಗೆ ರೇಬಿಸ್ ಸೋಂಕು ತಗುಲಿಲ್ಲವಾದರೆ ಮತ್ತು ಅವು ಕಚ್ಚುವ ಸ್ವಭಾವದವಲ್ಲ ಎಂದು ಖಾತ್ರಿಯಾದರೆ ಮಾತ್ರ ಹೊರಗೆ ಬಿಡಬೇಕು ಎಂದು ಹೇಳಿದೆ.
ನಾಯಿಗಳಿಗೆ ಆಹಾರವನ್ನು ಬೇಕಾಬಿಟ್ಟಿಯಾಗಿ ಬಿಸಾಡದೆ, ಅದಕ್ಕಾಗಿ ನಿರ್ದಿಷ್ಟ ಸ್ಥಳವನ್ನು ಸ್ಥಳೀಯ ಆಡಳಿತ ಗುರುತಿಸಬೇಕು. ಇದು ಆಯಾ ಬಡಾವಣೆಯ ಜನವಸತಿ ಪ್ರದೇಶ, ಬೀದಿ ನಾಯಿಗಳ ಸಂಖ್ಯೆಗೆ ಅನುಗುಣವಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ತನ್ನ ಆದೇಶದ ವ್ಯಾಪ್ತಿಯನ್ನು ಇಡೀ ದೇಶಕ್ಕೆ ವಿಸ್ತರಿಸುವ ಬಗ್ಗೆ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಈ ಪ್ರಕರಣದಲ್ಲಿ ಪಕ್ಷಗಾರರನ್ನಾಗಿಸಿ, ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ ವಿಚಾರಣೆಗೆ ಬಾಕಿ ಇರುವ ಬೀದಿ ನಾಯಿಗಳ ಕುರಿತ ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ತನೆಗೆ ವರ್ಗಾಯಿಸಿಕೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.