
ನವದೆಹಲಿ: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಸಮಯದಲ್ಲಿ ಭಾರತೀಯ ಚುನಾವಣಾ ಆಯೋಗ ಅಳವಡಿಸಿಕೊಂಡ ವಿಧಾನದಲ್ಲಿ ಯಾವುದೇ ಅಕ್ರಮ ಕಂಡುಬಂದರೆ, ಸಂಪೂರ್ಣ ಪ್ರಕ್ರಿಯೆಯನ್ನೇ ರದ್ದುಗೊಳಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಎಚ್ಚರಿಸಿದೆ.
ಬಿಹಾರದ ಎಸ್‌ಐಆರ್‌ನ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಅಂತಿಮ ವಿಚಾರಣೆಯನ್ನು ಅಕ್ಟೋಬರ್ 7ರಂದು ನಡೆಸುವುದಾಗಿ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಜೊಯ್‌ಮಲ್ಯ ಬಾಗ್ಚಿ ಅವರ ಪೀಠ ತಿಳಿಸಿತು. ಈ ಪ್ರಕ್ರಿಯೆಯ ಕುರಿತು ಅರೆಬರೆ ಅಭಿಪ್ರಾಯಗಳನ್ನು ನೀಡುವುದಿಲ್ಲ ಎಂದೂ ಪೀಠ ಹೇಳಿತು.
ಚುನಾವಣಾ ಆಯೋಗವು ಸಾಂವಿಧಾನಿಕ ಪ್ರಾಧಿಕಾರವಾಗಿದ್ದು, ಬಿಹಾರದಲ್ಲಿ ಎಸ್‌ಐಆರ್ ಸಮಯದಲ್ಲಿ ಕಾನೂನನ್ನು ಅನುಸರಿಸುತ್ತಿದೆ ಎಂದು ಭಾವಿಸುವುದಾಗಿ ಎಂದೂ ಪೀಠ ಹೇಳಿತು.
‘ಬಿಹಾರದ ಎಸ್‌ಐಆರ್ ಕುರಿತ ನಮ್ಮ ತೀರ್ಪು ಇಡೀ ದೇಶಕ್ಕೆ (ಪ್ಯಾನ್ ಇಂಡಿಯಾ) ಅನ್ವಯಿಸುತ್ತದೆ. ದೇಶದಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ನಡೆಸುವುದರಿಂದ ಚುನಾವಣಾ ಆಯೋಗವನ್ನು ತಡೆಯಲು ಸಾಧ್ಯವಿಲ್ಲ‘ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
ಅಕ್ಟೋಬರ್ 7ರ ವಿಚಾರಣೆಯ ಸಂದರ್ಭದಲ್ಲಿ ನಿರ್ದಿಷ್ಟವಾಗಿ ಬಿಹಾರದ ಎಸ್‌ಐಆರ್ ಹಾಗೂ ದೇಶದಾದ್ಯಂತದ ಎಸ್‌ಐಆರ್ ಕುರಿತು ವಾದಿಸಲು ಅರ್ಜಿದಾರರಿಗೆ ಪೀಠ ಅನುಮತಿ ನೀಡಿತು.
ಬಿಹಾರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಆಧಾರ್ ಕಾರ್ಡ್ ಅನ್ನು 12ನೇ ದಾಖಲೆಯಾಗಿ ಸೇರಿಸಲು ಮತ್ತು ಆಧಾರ್ ಅನ್ನು ಗುರುತಿನ ಪುರಾವೆಯಾಗಿ ಮಾತ್ರ ಬಳಸಬಹುದು ಎಂದು ಸೆಪ್ಟೆಂಬರ್ 8 ರಂದು ಹೊರಡಿಸಿದ ಆದೇಶವನ್ನು ಮಾರ್ಪಡಿಸಲು ನ್ಯಾಯಪೀಠ ನಿರಾಕರಿಸಿತು. ಜತೆಗೆ, ಈ ಆದೇಶ ಹಿಂಪಡೆಯಬೇಕು ಎಂದು ಕೋರಿ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿರುವ ಅರ್ಜಿಯ ಸಂಬಂಧ ನೋಟಿಸ್ ಜಾರಿ ಮಾಡಿತು.
‘ನಮ್ಮ ನಿರ್ದೇಶನವು ಕೇವಲ ಮಧ್ಯಂತರ ಸ್ವರೂಪದ್ದಾಗಿದೆ. ಪುರಾವೆಯಾಗಿ ದಾಖಲೆಯ ಸಿಂಧುತ್ವದ ವಿಷಯವನ್ನು ಎಸ್‌ಐಆರ್‌ಗೆ ಸಂಬಂಧಿಸಿದ ವಿಷಯದಲ್ಲಿ ಇನ್ನಷ್ಟೇ ನಿರ್ಧರಿಸಬೇಕಾಗಿದೆ’ ಎಂದು ಸ್ಪಷ್ಟಪಡಿಸಿತು.
ಚಾಲನಾ ಪರವಾನಗಿಗಳನ್ನು ನಕಲಿ ಮಾಡಬಹುದು, ಪಡಿತರ ಚೀಟಿಗಳನ್ನು ನಕಲಿ ಮಾಡಬಹುದು. ಹಲವಾರು ದಾಖಲೆಗಳನ್ನು ನಕಲಿ ಮಾಡಬಹುದು. ಕಾನೂನು ಅನುಮತಿಸುವ ಮಟ್ಟಿಗೆ ಆಧಾರ್ ಅನ್ನು ಬಳಸಿಕೊಳ್ಳಬೇಕು.– ನ್ಯಾಯಪೀಠ
ವಕೀಲರ ವಾದವೇನು?
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಸಂಪೂರ್ಣ ಪ್ರಕ್ರಿಯೆ ನಡೆಸಲು ಚುನಾವಣಾ ಆಯೋಗಕ್ಕೆ ಅವಕಾಶ ನೀಡಬೇಕು. ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನ್ಯಾಯಾಲಯವು ಅದನ್ನು ಉತ್ತಮವಾಗಿ ಮೌಲ್ಯಮಾಪನ ಮಾಡಲು ಸಾಧ್ಯವಾಗುತ್ತದೆ.– ರಾಕೇಶ್ ದ್ವಿವೇದಿ, ಚುನಾವಣಾ ಆಯೋಗದ ಪರ ವಕೀಲ
ಇತರ ರಾಜ್ಯಗಳಲ್ಲಿ ಎಸ್‌ಐಆರ್ ನಡೆಸಲು ಆಯೋಗವು ಪೂರ್ವಸಿದ್ಧತೆ ಆರಂಭಿಸಿದೆ. ಈ ಸಂಬಂಧ ಸೆಪ್ಟೆಂಬರ್ 10ರಂದು ಎಲ್ಲ ರಾಜ್ಯಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದೆ. ಇದಕ್ಕೆ ಅವಕಾಶ ನೀಡಬಾರದು.– ಗೋಪಾಲ್ ಶಂಕರ ನಾರಾಯಣನ್, ಅರ್ಜಿದಾರರ ಪರ ವಕೀಲ
ಬಿಹಾರದಲ್ಲಿ ನವೆಂಬರ್ 22ಕ್ಕೆ ಮೊದಲು ಹೊಸ ಸರ್ಕಾರ ರಚನೆಯಾಗಬೇಕು. ಹೀಗಾಗಿ, ಅಕ್ಟೋಬರ್ ಮಧ್ಯಭಾಗದಲ್ಲಿ ಚುನಾವಣಾ ವೇಳಾಪಟ್ಟಿ ಘೋಷಣೆಯಾಗುವ ಸಾಧ್ಯತೆ ಇದೆ. ಆಯೋಗ ಕಾನೂನುಬಾಹಿರ ವಿಧಾನ ಅಳವಡಿಸಿಕೊಂಡು ಎಸ್‌ಐಆರ್ ನಡೆಸುತ್ತಿದೆ. ಅಕ್ಟೋಬರ್ 1ರಂದು ಮತದಾರರ ಪಟ್ಟಿ ಪ್ರಕಟವಾಗಲಿದೆ. ಅದಕ್ಕೂ ಮುನ್ನವೇ ಅರ್ಜಿಯ ವಿಚಾರಣೆ ನಡೆಸಬೇಕು.– ವೃಂದಾ ಗ್ರೋವರ್, ಅರ್ಜಿದಾರರ ಪರ ವಕೀಲೆ
ಎಸ್‌ಐಆರ್ ಸಂದರ್ಭದಲ್ಲಿ ಆಯೋಗವು ನಿಯಮಗಳನ್ನು ಉಲ್ಲಂಘಿಸಿದೆ. ವಾಸ್ತವಿಕವಾಗಿ ಈ ಪ್ರಕ್ರಿಯೆಯಲ್ಲಿ ಯಾವುದೇ ಪಾರದರ್ಶಕತೆ ಇಲ್ಲ.– ಪ್ರಶಾಂತ್ ಭೂಷಣ್, ಹಿರಿಯ ವಕೀಲ
ವಿದೇಶಿಯರಿಗೂ ಆಧಾರ್ ಕಾರ್ಡ್ ನೀಡಲಾಗುತ್ತದೆ. ದಯವಿಟ್ಟು ಸೆಪ್ಟೆಂಬರ್ 8ರ ಆದೇಶ ಮಾರ್ಪಡಿಸಿ. ಇಲ್ಲದಿದ್ದರೆ ಹಾನಿಕಾರಕವಾಗುತ್ತದೆ.– ಅಶ್ವಿನಿ ಕುಮಾರ್ ಉಪಾಧ್ಯಾಯ, ವಕೀಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.