
ನವದೆಹಲಿ: ಲೋಕಸಭೆ, ರಾಜ್ಯಗಳ ವಿಧಾನಸಭೆ ಹಾಗೂ ದೆಹಲಿ ವಿಧಾನಸಭೆಯಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲಾತಿ ಕಲ್ಪಿಸುವ ಕಾನೂನು ಜಾರಿ ಮಾಡಬೇಕು ಎಂದು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.
ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿ.ವಿ ನಾಗರತ್ನ ಹಾಗೂ ಆರ್. ಮಹಾದೇವನ್ ಅವರಿದ್ದ ಪೀಠ, ಮೀಸಲಾತಿಯ ಪರವಾಗಿ ಟಿಪ್ಪಣಿಗಳನ್ನು ಮಾಡಿದರು. ‘ಮಹಿಳೆಯರು ದೇಶದ ದೊಡ್ಡ ಅಲ್ಪಸಂಖ್ಯಾತರು’ ಎಂದೂ ಪೀಠ ಹೇಳಿತು.
‘ಎಲ್ಲಾ ನಾಗರಿಕರು ರಾಜಕೀಯ ಹಾಗೂ ಸಾಮಾಜಿಕ ಸಮಾನತೆ ಪಡೆಯಲು ಅರ್ಹರು ಎನ್ನುವುದನ್ನು ಸಂವಿಧಾನದ ಪ್ರಸ್ತಾವನೆಯೇ ಹೇಳುತ್ತದೆ. ದೇಶದಲ್ಲಿ ಅತಿ ದೊಡ್ಡ ಅಲ್ಪಸಂಖ್ಯಾತರು ಯಾರು? ಮಹಿಳೆಯರು; ಶೇ 48ರಷ್ಟಿದ್ದಾರೆ. ಇದು ಮಹಿಳೆಯರಿಗೆ ರಾಜಕೀಯ ಸಮಾನತೆ ನೀಡುವುದಕ್ಕೆ ಸಂಬಂಧಿಸಿದ್ದು’ ಎಂದು ನ್ಯಾಯಮೂರ್ತಿ ನಾಗರತ್ನ ಮೌಖಿಕವಾಗಿ ಹೇಳಿದರು.
ಮುಂದಿನ ಕ್ಷೇತ್ರ ಪುನರ್ವಿಂಗಡನೆ ಪ್ರಕ್ರಿಯೆಗೆ ಕಾಯದೇ ಕೂಡಲೇ ಮಹಿಳಾ ಮೀಸಲಾತಿ ಕಾನೂನನ್ನು ಜಾರಿ ಮಾಡಬೇಕು ಎಂದು ಕೋರಿ ಕಾಂಗ್ರೆಸ್ ನಾಯಕಿ ಜಯಾ ಠಾಕೂರ್ ಅವರು ಸಲ್ಲಿಸಿದ್ದ ಪಿಐಎಲ್ ವಿಚಾರಣೆ ವೇಳೆ ಕೋರ್ಟ್ ಹೀಗೆ ಹೇಳಿದೆ. ಅಲ್ಲದೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.
‘ಬ್ರಿಟಿಷ್ ವಸಾಹತು ಆಳ್ವಿಕೆಯಿಂದ ಸ್ವಾತಂತ್ರ್ಯಗೊಂಡು 75 ವರ್ಷಗಳಾದರೂ, ಪ್ರಾತಿನಿಧ್ಯಕ್ಕಾಗಿ ಕೋರ್ಟ್‌ಗೆ ಬರಬೇಕಾಗಿದ್ದು ದುರದೃಷ್ಟಕರ. ಅವರಿಗೆ ಕೇವಲ ಮೂರನೇ ಒಂದರಷ್ಟು ಮಾತ್ರ ಮೀಸಲಾತಿ ಇದೆ. ಅದಕ್ಕೂ ಯಾವುದೋ ದತ್ತಾಂಶಕ್ಕೆ ಕಾಯಬೇಕಾಗಿದೆ’ ಎಂದು ಅರ್ಜಿದಾರರ ಪರ ವಕೀಲಾರದ ಶೋಭಾ ಗುಪ್ತಾ ಹೇಳಿದರು.
‘ಕ್ಷೇತ್ರ ಪುನರ್ವಿಂಗಡನೆ ಪ್ರಕ್ರಿಯೆ ಯಾವಾಗ? ಸರ್ಕಾರಕ್ಕೆ ನೋಟಿಸ್ ನೀಡಿ. ಕಾನೂನು ಜಾರಿ ಕಾರ್ಯಾಂಗದ ಕೆಲಸವಾಗಿದ್ದು, ಅದರಲ್ಲಿ ನಾವು ಮಧ್ಯಪ್ರವೇಶಿಸಲು ಆಗುವುದಿಲ್ಲ. ಪ್ರತಿವಾದಿಗಳಿಗೂ, ಕೇಂದ್ರ ಸರ್ಕಾರಕ್ಕೂ ನೋಟಿಸ್ ಜಾರಿ ಮಾಡಿ’ ಎಂದು ಕೋರ್ಟ್ ಹೇಳಿತು.
2023ರ ಸೆಪ್ಟೆಂಬರ್‌ನಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲಾಗಿತ್ತು. ಅದೇ ತಿಂಗಳಿನಲ್ಲಿ ರಾಷ್ಟ್ರಪತಿ ಸಹಿಯೂ ಬಿದ್ದಿತ್ತು.
ಜನಗಣತಿ ನಡೆದು ಆ ಬಳಿಕ ನಡೆಯುವ ಕ್ಷೇತ್ರ ಪುನರ್ವಿಂಗಡನೆ ಮಾಡಿದ ಬಳಿಕ ಈ ಕಾನೂನು ಜಾರಿಯಾಗಲಿದೆ.
(ಬಾರ್ ಆ್ಯಂಡ್ ಬೆಂಚ್ ವರದಿ ಆಧರಿಸಿ ಬರೆದ ಸುದ್ದಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.