
ತಿರುವನಂತಪುರ: ಕೇರಳದ ಕೊಚ್ಚಿಯಲ್ಲಿ ಕಾಣೆಯಾದ ತನ್ನ ತಂದೆಯನ್ನು ಹುಡುಕುಲು ಬೆಂಗಳೂರಿನ ಯುವಕ ನಡೆಸುತ್ತಿರುವ ಪ್ರಯತ್ನಗಳು ದುರಂತ ಅಂತ್ಯದತ್ತ ಸಾಗಿದ್ದು, ಅವರ ತಂದೆಯದ್ದೆಂದು ಶಂಕಿಸಲಾಗಿರುವ ಮೃತದೇಹವೊಂದು ಕಳಮಶ್ಶೇರಿಯ ಜೌಗು ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಘಟನೆ ಬಗ್ಗೆ ಕೇರಳ ಹೈಕೋರ್ಟ್ ಮತ್ತು ಯುವಕನ ಕುಟುಂಬ ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ನಗರದ ಜೌಗು ಪ್ರದೇಶದಲ್ಲಿ ಒಂದು ತಿಂಗಳು ಶವವೊಂದು ಯಾರ ಗಮನಕ್ಕೂ ಬರದೆ ಇರಲು ಹೇಗೆ ಸಾಧ್ಯ ಎಂದು ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಮೃತದೇಹದ ಗುರುತು ಪತ್ತೆಗಾಗಿ ಡಿಎನ್‌ಎ ವರದಿಗಾಗಿ ಕಾಯಲಾಗುತ್ತಿದೆ.
ಕೇರಳ ಆರೋಗ್ಯ ವ್ಯವಸ್ಥೆಯ ಲೋಪ ಮತ್ತು ವಲಸೆ ಅಧಿಕಾರಿಗಳ ವೈಫಲ್ಯದಿಂದಾಗಿ ತನ್ನ ತಂದೆ ನಾಪತ್ತೆಯಾಗಿದ್ದಾರೆ ಎಂದು ಸಂತೋನ್ ಟೀಕಿಸಿದ್ದಾರೆ. ‘ಸ್ಮರಣ ಶಕ್ತಿಯ ಕೊರತೆಯಿಂದ ಬಳಲುತ್ತಿರುವ ರೋಗಿಯನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ದಿದ್ದರೂ, ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಅವರನ್ನು ಹೊರಗೆ ಬಿಡುವುದು ಹೇಗೆ ಸಾಧ್ಯ? ವಲಸೆ ಅಧಿಕಾರಿಗಳು ತಂದೆಯ ಮಾನಸಿಕ ಸ್ಥಿತಿಯನ್ನು ಅರಿತುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಮತ್ತು ಅವರಿಗೆ ಹೊರಗೆ ಹೋಗಲು ಅವಕಾಶ ನೀಡಿದ್ದಾರೆ’ ಎಂದು ಅವರು ಹೇಳಿದ್ದಾರೆ.
ಅಕ್ಟೋಬರ್ 5ರಂದು ಕುವೈತ್‌ನಿಂದ ಕೊಚ್ಚಿಗೆ ಗಡೀಪಾರಾದ ಸೂರಜ್ ಲಾಮಾ (59) ಅವರು ಕೊಚ್ಚಿಯ ಕಳಮಶ್ಶೇರಿಯಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಿಂದ ನಾಪತ್ತೆಯಾಗಿದ್ದರು. ಬೆಂಗಳೂರಿನ ಕೊತ್ತನೂರಿನಲ್ಲರುವ ಅವರ ಮಗ ಸಂತೊನ್ ಲಾಮಾ ತಂದೆಯನ್ನು ಹುಡುಕುತ್ತಾ ಒಂದು ತಿಂಗಳಿಗೂ ಹೆಚ್ಚು ಕಾಲ ಕೊಚ್ಚಿಯಲ್ಲಿದ್ದರು. ನಂತರ ಅವರು ಕೇರಳ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದು, ನ್ಯಾಯಾಲಯವು ಅವರನ್ನು ಹುಡುಕುವಂತೆ ನಿರ್ದೇಶನ ನೀಡಿತ್ತು.
ಕುವೈತ್‌ನಲ್ಲಿ 20 ವರ್ಷಗಳಿಗೂ ಹೆಚ್ಚು ಕಾಲ ರೆಸ್ಟೋರೆಂಟ್ ವ್ಯವಹಾರ ಮಾಡುತ್ತಿದ್ದ ಸೂರಜ್ ಸೆಪ್ಟೆಂಬರ್‌ನಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದರು ಮತ್ತು ಸ್ಮರಣ ಶಕ್ತಿಯನ್ನು ಕಳೆದುಕೊಂಡಿದ್ದರು. ಅವರ ವೀಸಾ ಅವಧಿ ಮುಗಿದ ಕಾರಣ ಅವರನ್ನು ಅಕ್ಟೋಬರ್ 5ರಂದು ಕೊಚ್ಚಿಗೆ ಗಡೀಪಾರು ಮಾಡಲಾಗಿತ್ತು. ಅಕ್ಟೋಬರ್ 7ಕ್ಕೆ ಅವರ ಕುಟುಂಬಕ್ಕೆ ಈ ವಿಷಯ ತಿಳಿದಿದ್ದು, ಅವರ ಮಗ ಸಂತೋನ್ ಕೊಚ್ಚಿಗೆ ಬಂದಿದ್ದರು. ಈ ವೇಳೆಗಾಗಲೆ ಸೂರಜ್ ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಂದ ಅವರು ನಾಪತ್ತೆಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.