ADVERTISEMENT

ಸೂರತ್‌: ಮಾನನಷ್ಟ ಮೊಕದ್ದಮೆ: ರಾಹುಲ್‌ ಖುದ್ದು ಹಾಜರಿಗೆ ಸೂಚನೆ

ಸೂರತ್‌ನ ನ್ಯಾಯಾಲಯ ಇದೇ 23ರಂದು ತೀರ್ಪು ಪ್ರಕಟಿಸುವ ಸಾಧ್ಯತೆ

ಪಿಟಿಐ
Published 20 ಮಾರ್ಚ್ 2023, 11:40 IST
Last Updated 20 ಮಾರ್ಚ್ 2023, 11:40 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ಸೂರತ್‌: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆಯ ವಿಚಾರಣೆ ಪೂರ್ಣಗೊಳಿಸಿರುವ ಇಲ್ಲಿನ ನ್ಯಾಯಾಲಯ ಇದೇ 23ರಂದು ಅಂತಿಮ ತೀರ್ಪು ‍ಪ್ರಕಟಿಸುವ ಸಾಧ್ಯತೆ ಇದೆ. ಅಂದು ಖುದ್ದು ಹಾಜರಿರುವಂತೆ ರಾಹುಲ್‌ಗೆ ಸೂಚಿಸಲಾಗಿದೆ.

2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದ ಕೋಲಾರದಲ್ಲಿ ಹಮ್ಮಿಕೊಂಡಿದ್ದ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ರಾಹುಲ್‌, ‘ಕಳ್ಳರೆಲ್ಲರಿಗೂ ಸಾಮಾನ್ಯವಾಗಿ ಮೋದಿ ಎಂಬ ಉಪನಾಮವೇ ಏಕಿರುತ್ತದೆ’ ಎಂದು ಪ್ರಶ್ನಿಸಿದ್ದರು.

ರಾಹುಲ್‌ ಅವರು ತಮ್ಮ ಹೇಳಿಕೆ ಮೂಲಕ ಮೋದಿ ಉಪನಾಮ ಹೊಂದಿರುವವರನ್ನೆಲ್ಲಾ ಹೀಯಾಳಿಸಿದ್ದಾರೆ ಎಂದು ಆರೋಪಿಸಿದ್ದ ಗುಜರಾತ್‌ನ ಬಿಜೆಪಿ ಶಾಸಕ ಪೂರ್ಣೇಶ್‌ ಮೋದಿ ಅವರು ಕಾಂಗ್ರೆಸ್‌ ಸಂಸದನ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ADVERTISEMENT

‘ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಶುಕ್ರವಾರ ಉಭಯ ಬಣದವರ ಅಂತಿಮ ವಾದ ಆಲಿಸಿದ್ದ ಚೀಫ್‌ ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಎಚ್‌.ಎಚ್‌.ವರ್ಮಾ ಅವರು ವಿಚಾರಣೆ ಪೂರ್ಣಗೊಳಿಸಿದ್ದಾರೆ. ಇದೇ 23ರಂದು ಅವರು ತೀರ್ಪು ಪ್ರಕಟಿಸುವ ನಿರೀಕ್ಷೆ ಇದೆ’ ಎಂದು ರಾಹುಲ್‌ ಪರ ವಕೀಲ ಕಿರೀಟ್‌ ಪನ್ವಾಲಾ ಸೋಮವಾರ ತಿಳಿಸಿದ್ದಾರೆ.

‘ರಾಹುಲ್‌ ಅವರು ಕೋಲಾರದಲ್ಲಿ ನಡೆದಿದ್ದ ರ‍್ಯಾಲಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಆ ಮೂಲಕ ಮೋದಿ ಉಪನಾಮ ಹೊಂದಿರುವವರನ್ನೆಲ್ಲಾ ನಿಂದಿಸಿದ್ದಾರೆ’ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠಕ್ಕೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.