ADVERTISEMENT

ಕೇಂದ್ರ ಸಚಿವ ಸುರೇಶ್ ಗೋಪಿಗೆ ಎರಡು ಕಡೆ ಮತದಾನದ ಹಕ್ಕು: ಸಿಪಿಐ ನಾಯಕ ಆರೋಪ

ಪಿಟಿಐ
Published 10 ಡಿಸೆಂಬರ್ 2025, 6:36 IST
Last Updated 10 ಡಿಸೆಂಬರ್ 2025, 6:36 IST
<div class="paragraphs"><p>ಸುರೇಶ್ ಗೋಪಿ</p></div>

ಸುರೇಶ್ ಗೋಪಿ

   

(ಪಿಟಿಐ ಚಿತ್ರ)

ತಿರುವನಂತಪುರ: ಕೇಂದ್ರ ಸಚಿವ ಸುರೇಶ್ ಗೋಪಿ ಅವರಿಗೆ ಎರಡೆರಡು ಕಡೆ ಮತದಾನದ ಹಕ್ಕು ಇದೆ ಎಂದು ಸಿಪಿಐ ನಾಯಕ ವಿ.ಎಸ್. ಸುನಿಲ್ ಕುಮಾರ್ ಆರೋಪಿಸಿದ್ದಾರೆ.

'ಕೇರಳದ ಸ್ಥಳೀಡಾಳಿತ ಸಂಸ್ಥೆಗಳಿಗೆ ನಡೆದ ಮೂದಲ ಹಂತದ ಮತದಾನದ ವೇಳೆ ಸುರೇಶ್ ಗೋಪಿ, ತಿರುವನಂತಪುರದಲ್ಲಿ ಮತ ಚಲಾಯಿಸಿದ್ದರು. ಆದರೆ 2024ರ ಲೋಕಸಭಾ ಚುನಾವಣೆಯಲ್ಲಿ ತ್ರಿಶೂರ್‌ನಿಂದ ಮತದಾನ ಮಾಡಿದ್ದರು' ಎಂದು ಅವರು ಹೇಳಿದ್ದಾರೆ.

'ಸುರೇಶ್ ಗೋಪಿ ಎರಡು ಕಡೆ ಮತದಾನದ ಹಕ್ಕು ಹೊಂದಲು ಹೇಗೆ ಸಾಧ್ಯ? ಈ ಕುರಿತು ಚುನಾವಣಾ ಆಯೋಗ ಹಾಗೂ ಕೇಂದ್ರ ಸಚಿವರು ಉತ್ತರಿಸಬೇಕು' ಎಂದು ಅವರು ಆಗ್ರಹಿಸಿದ್ದಾರೆ.

ಫೇಸ್‌ಬುಕ್ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿರುವ ಸುನಿಲ್, 'ಕಳೆದ ಲೋಕಸಭಾ ಚುನಾವಣೆಯಲ್ಲಿ ಸುರೇಶ್ ಗೋಪಿ ಹಾಗೂ ಅವರ ಕುಟುಂಬ ತ್ರಿಶೂರ್‌ನ ನೆಟ್ಟಿಶ್ಶೇರಿಯಿಂದ ಮತದಾನ ಮಾಡಿದ್ದರು. ನಾನು ತ್ರಿಶೂರ್‌ನ ನಿವಾಸಿ ಅವರು ಹೇಳಿಕೊಂಡಿದ್ದರು' ಎಂದು ಹೇಳಿದ್ದಾರೆ.

'ಆದರೆ ಮಂಗಳವಾರದಂದು ಸ್ಥಳೀಡಾಳಿತ ಸಂಸ್ಥೆಗಳಿಗೆ ಮೊದಲ ಹಂತದ ಮತದಾನದ ವೇಳೆ ಸುರೇಶ್ ಗೋಪಿ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ತಿರುವನಂತಪುರ ಪುರಸಭೆಯ ಶಾಸ್ತಮಂಗಲಂ ವಾರ್ಡ್‌ನಲ್ಲಿ ಮತ ಚಲಾಯಿಸಿದ್ದರು' ಎಂದು ಹೇಳಿದ್ದಾರೆ.

2024ರ ಲೋಕಸಭೆ ಚುನಾವಣೆಯಲ್ಲಿ ತ್ರಿಶೂರ್ ಕ್ಷೇತ್ರದಲ್ಲಿ ಸುನಿಲ್ ಕುಮಾರ್ ಅವರನ್ನು ಸುರೇಶ್ ಗೋಪಿ ಸುಮಾರು 75 ಸಾವಿರ ಮತಗಳ ಅಂತರದಿಂದ ಮಣಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.