ADVERTISEMENT

ಸರ್ಜಿಕಲ್ ಸ್ಟ್ರೈಕ್‌ನಿಂದ ಜಗತ್ತಿಗೆ ಪ್ರಬಲ ಸಂದೇಶ ರವಾನೆ: ಅಮಿತ್ ಶಾ

ಪಿಟಿಐ
Published 14 ಅಕ್ಟೋಬರ್ 2021, 14:14 IST
Last Updated 14 ಅಕ್ಟೋಬರ್ 2021, 14:14 IST
ಅಮಿತ್ ಶಾ
ಅಮಿತ್ ಶಾ   

ಪಣಜಿ: ಐದು ವರ್ಷಗಳ ಹಿಂದೆ ಪಾಕಿಸ್ತಾನ ವಿರುದ್ಧ ಭಾರತ ಕೈಗೊಂಡ ಸರ್ಜಿಕಲ್ ಸ್ಟ್ರೈಕ್ ಮೂಲಕ ತನ್ನ ಗಡಿಯಲ್ಲಿ ಯಾರೂ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಜಗತ್ತಿಗೆ ಪ್ರಬಲವಾದ ಸಂದೇಶವನ್ನು ಭಾರತ ರವಾನಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಭಯೋತ್ಪಾದಕ ದಾಳಿಗೆ ತಕ್ಕ ಉತ್ತರ ನೀಡುತ್ತಿದೆ. ಆದರೆ ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರದಲ್ಲಿದ್ದಾಗ ಪರಿಸ್ಥಿತಿ ಹೀಗಾಗಿರಲಿಲ್ಲ ಎಂದು ಅಮಿತ್ ಶಾ ಟೀಕಿಸಿದ್ದಾರೆ.

ದಕ್ಷಿಣ ಗೋವಾದ ಧಾರ್‌ಬಂಡೋರಾ ಗ್ರಾಮದಲ್ಲಿ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಅಡಿಗಲ್ಲು ಹಾಕಿದ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, 'ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಗಡಿಯಾಚೆಗಿನ ಭಯೋತ್ಪಾದಕರು ಭಾರತದೊಳಗೆ ನುಸುಳಿಕೊಂಡು ಅಶಾಂತಿ ಸೃಷ್ಟಿಸುತ್ತಿದ್ದರು. ಆದರೂ ದೆಹಲಿಯಲ್ಲಿದ್ದ ಸರ್ಕಾರ ಏನೂ ಮಾಡುತ್ತಿರಲಿಲ್ಲ. ಆದರೆ ಈಗಿನ ಸರ್ಕಾರ ಉಗ್ರರಿಗೆ ಅರ್ಥವಾಗುವ ಭಾಷೆಯಲ್ಲಿಯೇ ಉತ್ತರಿಸುತ್ತದೆ' ಎಂದು ಹೇಳಿದ್ದಾರೆ.

2016ರ ಸರ್ಜಿಕಲ್ ಸ್ಟ್ರೈಕ್ ಅನ್ನು ಉಲ್ಲೇಖಿಸಿದ ಅಮಿತ್ ಶಾ, ಭಾರತವು ಮಿಲಿಟರಿ ಕ್ರಮದ ಮೂಲಕ ತನ್ನ ಗಡಿಯಲ್ಲಿ ಯಾರೂ ಹಸ್ತಕ್ಷೇಪ ಮಾಡುವಂತಿಲ್ಲ ಎಂಬ ಬಲವಾದ ಸಂದೇಶವನ್ನು ಇಡೀ ವಿಶ್ವಕ್ಕೆ ರವಾನಿಸಿದೆ ಎಂದು ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಸೇನಾ ನೆಲೆಯ ಮೇಲೆ ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಭಾರತವು 2016 ಸೆಪ್ಟೆಂಬರ್ 29ರಂದು ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಉಗ್ರರ ಅಡಗುದಾಣಗಳ ಮೇಲೆ (ಎಲ್‌ಒಸಿ) ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.