ADVERTISEMENT

ಲಾಕ್‌ಡೌನ್ ವೇಳೆ ವೃದ್ಧರು, ಯುವ ಜನತೆ ನಡುವಣ ಸಂಬಂಧ ಹಳಸುತ್ತಿದೆ: ಸಮೀಕ್ಷೆ

ಶೆಮಿಜ್‌ ಜಾಯ್‌
Published 25 ಏಪ್ರಿಲ್ 2020, 11:14 IST
Last Updated 25 ಏಪ್ರಿಲ್ 2020, 11:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಲಾಕ್‌ಡೌನ್‌ ವೇಳೆ ತಮ್ಮ ಆರೋಗ್ಯ ಹದಗೆಡುತ್ತಿದೆ ಮತ್ತು ಯುವಜನತೆ ಜತೆಗಿನ ಸಂಬಂಧ ಹಳಸುತ್ತಿದೆ ಎಂಬುದಾಗಿ ವೃದ್ಧರು ಭಾವಿಸುತ್ತಿದ್ದಾರೆ. ಅದರಲ್ಲೂ ಅವರ ಮಗ, ಮಗಳ ಜತೆಗಿನ ಸಂಬಂಧ ಹದಗೆಡುತ್ತಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

‘ಏಜ್‌ವೆಲ್ ಫೌಂಡೇಶನ್’ ಸಂಸ್ಥೆಯು ದೂರವಾಣಿ ಮೂಲಕ ಸುಮಾರು 5,000 ವೃದ್ಧರನ್ನು ಸಮೀಕ್ಷೆಗೆ ಒಳಪಡಿಸಿದೆ. ಈ ಪೈಕಿ ಪ್ರತಿ ಇಬ್ಬರಲ್ಲೊಬ್ಬರಂತೆ ಮಕ್ಕಳ ಮೇಲೆ ದೌರ್ಜನ್ಯ, ಕಿರುಕುಳ, ಬೆದರಿಕೆ, ನಿರ್ಲಕ್ಷ್ಯ, ಪ್ರತ್ಯೇಕ ವಾಸದ ಆರೋಪ ಮಾಡಿದ್ದಾರೆ.

ಸಮೀಕ್ಷೆಗೆ ಒಳಗಾದವರ ಪೈಕಿ ಶೇ 55ರಷ್ಟು ಮಂದಿ ಲಾಕ್‌ಡೌನ್‌ ಪರಿಸ್ಥಿತಿಯು ತಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ. ಶೇ 75ರಷ್ಟು ಮಂದಿ ನಿಯಮಿತ ವೈದ್ಯಕೀಯ ತಪಾಸಣೆ ಇಲ್ಲದೆ ಸಮಸ್ಯೆಗೆ ಒಳಗಾಗಿರುವುದಾಗಿ ತಿಳಿಸಿದ್ದಾರೆ.

ಸಮೀಕ್ಷೆಗೆ ಒಳಗಾದವರ ಪೈಕಿ ಶೇ 54 ಮಂದಿ ಅವರ ಕುಟುಂಬದ ಯುವ ಸದಸ್ಯರ ಜತೆ ವಾಸಿಸುತ್ತಿದ್ದರೆ, ಶೇ 33 ಮಂದಿ ಸಂಗಾತಿಗಳ ಜತೆ ಮತ್ತು ಶೇ 13 ಮಂದಿ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಾರೆ.

ADVERTISEMENT

ಸಂವಹನ ಸಮಸ್ಯೆ, ಅಹಮಿಕೆಯಿಂದ ಉಂಟಾಗುವ ಸಂಘರ್ಷ, ಆಸಕ್ತಿ ಮತ್ತು ವರ್ತನೆಗಳ ಕಾರಣದಿಂದಾಗಿ ಬಾಂಧವ್ಯಗಳು ಹಾಳಾಗುತ್ತಿವೆ ಎಂದು ಶೇ 52ರಷ್ಟು ಮಂದಿ ‌ಅಭಿಪ್ರಾಯಪಟ್ಟಿದ್ದಾರೆ.

ಲಾಕ್‌ಡೌನ್‌ ವೇಳೆ ಏಕಾಂಗಿಯಾಗಿ ವಾಸಿಸುವ ವೃದ್ಧರಿಗೆ ಪ್ರಾಯೋಗಿಕ ಸಮಸ್ಯೆಗಳು ಹೆಚ್ಚಾದರೆ, ಕುಟುಂಬದವರ ಜತೆ ವಾಸಿಸುವವರು ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವೈದ್ಯಕೀಯ, ಹಣಕಾಸು ಬೆಂಬಲ, ಸಾಮಾಜಿಕ ಸಂವಹನ, ಸಾಕಷ್ಟು ಸ್ವಾತಂತ್ರ್ಯವಿಲ್ಲದೆ ವೃದ್ಧರು ಖಿನ್ನತೆಗೆ ಒಳಗಾಗುತ್ತಿದ್ದಾರೆ ಎಂದು ಏಜ್‌ವೆಲ್ ಫೌಂಡೇಶನ್‌ನ ಸ್ಥಾಪಕ ಹಿಮಾಂಶು ರಾಥ್ ಹೇಳಿದ್ದಾರೆ.

ಆಧುನಿಕ ತಂತ್ರಜ್ಞಾನವೇ ಬಾಂಧವ್ಯ ಹಾಳಾಗಲು ಕಾರಣ ಎಂದು ಪ್ರತಿ ನಾಲ್ವರಲ್ಲೊಬ್ಬರು ಅಭಿಪ್ರಾಯಪಟ್ಟರೆ, ಹಣಕಾಸು ಅವಲಂಬನೆ ಕಾರಣ ಎಂದು ಶೇ 31 ಮಂದಿ ಅಭಿಪ್ರಾಯಪಟ್ಟಿದ್ದಾರೆ.

ಲಾಕ್‌ಡೌನ್‌ ವೇಳೆ ಇತರ ಸದಸ್ಯರು ಮನೆಯಲ್ಲೇ ಇರುವುದರಿಂದ ತಮಗೆ ಕಡಿಮೆ ಪ್ರಾಶಸ್ತ್ಯ ಸಿಗುತ್ತಿದೆ ಎಂದು ಪ್ರತಿ ಐವರಲ್ಲಿ ಒಬ್ಬರು ದೂರಿದರೆ, ವಯೋಸಹಜವಾದ ತಮ್ಮ ವಿಶೇಷ ಅಗತ್ಯಗಳನ್ನು ಮನೆಯವರು ಕಡೆಗಣಿಸುತ್ತಿದ್ದಾರೆ ಎಂದು ಶೇ 15ರಷ್ಟು ಮಂದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.