
ಜೈಪುರ: ಭಾರತೀಯ ವಾಯುಪಡೆಯ ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡ (ಎಸ್‌ಕೆಎಟಿ) ಹಾಗೂ ಸಾರಂಗ್ ಹೆಲಿಕಾಪ್ಟರ್ ತಂಡಗಳು ಜೈಪುರದ ಪ್ರಖ್ಯಾತ ಜಲ್ ಮಹಲ್‌ನ ಬಾನಂಗಳದಲ್ಲಿ ಶುಕ್ರವಾರ ಮೈನವಿರೇಳಿಸುವ ವೈಮಾನಿಕ ಪ್ರದರ್ಶನ ನೀಡಿವೆ.
ಸಾರಂಗ್ ತಂಡದ ಅತ್ಯಾಧುನಿಕ ಲಘು ಹೆಲಿಕಾಪ್ಟರ್ (ಎಎಲ್‌ಎಚ್) ಆಗಿರುವ ಧ್ರುವ್ ಹಾರಾಟದ ಮೂಲಕ ವೈಮಾನಿಕ ಪ್ರದರ್ಶನಕ್ಕೆ ಚಾಲನೆ ದೊರಕಿದೆ. ಈ ಲೋಹದ ಹಕ್ಕಿಗಳು ಬಾನಂಗಳದಲ್ಲಿ ಚಿತ್ರಿಸಿದ ಬಾಣ ಹಾಗೂ ಹೃದಯಾಕಾರದ ಪ್ರದರ್ಶನಗಳನ್ನು ಕಂಡು ಜನರು ಹರ್ಷ ವ್ಯಕ್ತಪಡಿಸಿದ್ದಾರೆ.
ಸೂರ್ಯ ಕಿರಣ್ ತಂಡದ 9 ಹಾಕ್ ಎಂಕೆ–132 ವಿಮಾನಗಳು ತೇಜಸ್ ವಿನ್ಯಾಸದ ಮೂಲಕ ಪ್ರದರ್ಶನ ಆರಂಭಿಸಿವೆ. ಬಳಿಕ ಹಲವು ವಿನ್ಯಾಸಗಳನ್ನು ಪ್ರದರ್ಶಿಸಲಾಗಿದ್ದು, ಹಾಕ್‌ನ ಪ್ರಖ್ಯಾತ ಬ್ಯಾರೆಲ್–ರೋಲ್ (5 ಮೀಟರ್ ಅಂತರದಲ್ಲಿ ವಿಮಾನಗಳು ಒಂದರ ಹಿಂದೊಂದು ಏರಿಳಿತವಾಗಿ ಸಾಗುವುದು) ಪ್ರದರ್ಶನವು ನೋಡುಗರು ಹುಬ್ಬೇರಿಸುವಂತೆ ಮಾಡಿದೆ.
ವೈಮಾನಿಕ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಪೈಲಟ್‌ಗಳ ಪೈಕಿ ವಿಂಗ್ ಕಮಾಂಡರ್ ರಾಜೇಶ್ ಕಾಜ್ಲಾ, ವಿಂಗ್ ಕಮಾಂಡರ್ ಅಂಕಿತ್ ವಸಿಷ್ಠ, ಸ್ಕ್ವಾಡ್ರನ್ ಲೀಡರ್ ಸಂಜೇಶ್ ಸಿಂಗ್ ಅವರೂ ಇದ್ದರು. ಈ ಮೂವರೂ ಜೈಪುರದವರು ಎಂಬುದು ಗಮನಾರ್ಹ.
ಕೌಶಲ, ಶಿಸ್ತು, ಕಾರ್ಯಾಚರಣೆ ಶ್ರೇಷ್ಠತೆಯ ಪ್ರದರ್ಶನ ಜತೆಯಲ್ಲೇ ಸಶಸ್ತ್ರ ಪಡೆಗಳಲ್ಲಿ ವೃತ್ತಿ ಜೀವನ ರೂಪಿಸಿಕೊಳ್ಳುವಂತೆ ಯುವಕರನ್ನು ಪ್ರೇರೇಪಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಒಳಗೊಂಡಿದೆ ಎಂದು ಐಎಎಫ್‌ನ ಅಧಿಕಾರಿಯೊಬ್ಬರು ಹೇಳಿದ್ದಾರೆ. ಭಾನುವಾರವೂ ಇದೇ ಸ್ಥಳದಲ್ಲಿ ಮತ್ತೊಂದು ವೈಮಾನಿಕ ಪ್ರದರ್ಶನ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.