ADVERTISEMENT

ಸುಶಾಂತ್ ಪ್ರಕರಣ: ಸಿಬಿಐ ತನಿಖೆ ನಿರ್ಧಾರಕ್ಕೆ ಎನ್‌‌ಸಿಪಿ, ಕಾಂಗ್ರೆಸ್ ಟೀಕೆ

ಪಿಟಿಐ
Published 4 ಆಗಸ್ಟ್ 2020, 11:07 IST
Last Updated 4 ಆಗಸ್ಟ್ 2020, 11:07 IST
ನವಾಬ್‌ ಮಲಿಕ್
ನವಾಬ್‌ ಮಲಿಕ್   

ಮುಂಬೈ: ಬಾಲಿವುಡ್‌ ನಟ ಸುಶಾಂತ್ ಸಿಂಗ್ ರಜಪೂತ್‌‌ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸಿರುವ ಬಿಹಾರ ಸರ್ಕಾರದ ಕ್ರಮವನ್ನು ಮಹಾರಾಷ್ಟ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಎನ್‌ಸಿಪಿ ಹಾಗೂ ಕಾಂಗ್ರೆಸ್‌ ಟೀಕಿಸಿವೆ.

ಈ ನಡೆಯು ಮಹಾರಾಷ್ಟ್ರ ಸರ್ಕಾರದ ಹಕ್ಕಿನ ಮೇಲಿನ ಅತಿಕ್ರಮಣ ಎಂದು ಈ ಪಕ್ಷಗಳು ದೂರಿವೆ.

‘ಬಿಹಾರದಲ್ಲಿ ಕೋವಿಡ್‌ಗೆ ಕಡಿವಾಣ ಹಾಕಲು ನಿತೀಶ್‌ ಕುಮಾರ್‌ ನೇತೃತ್ವದ ಸರ್ಕಾರವು ವಿಫಲವಾಗಿದೆ. ಇದನ್ನು ಮರೆಮಾಚುವ ಹಾಗೂ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಸಲುವಾಗಿ ಸುಶಾಂತ್‌ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಲಾಗಿದೆ’ ಎಂದು ಎನ್‌ಸಿಪಿ ವಕ್ತಾರ ಹಾಗೂ ಸಚಿವ ನವಾಬ್‌ ಮಲಿಕ್‌ ಮಂಗಳವಾರ ಹೇಳಿದ್ದಾರೆ.

ADVERTISEMENT

‘ನಿತೀಶ್‌ ಸರ್ಕಾರದ ನಿರ್ಣಯವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನದಂತಿದೆ. ಇದು ಉತ್ತಮ ಬೆಳವಣಿಗೆಯಲ್ಲ. ಬಿಹಾರ ಸರ್ಕಾರವು ವಿನಾಕಾರಣ ಸುಶಾಂತ್‌ ಪ್ರಕರಣದಲ್ಲಿ ಮೂಗು ತೂರಿಸಿ ಬಿಕ್ಕಟ್ಟು ಸೃಷ್ಟಿಸುತ್ತಿದೆ’ ಎಂದು ಮಲಿಕ್ ದೂರಿದ್ದಾರೆ.

‘ಮುಂಬೈ ಪೊಲೀಸರು ನಿಷ್ಪಕ್ಷಪಾತವಾಗಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಈ ಪ್ರಕರಣವನ್ನು ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು’ ಎಂದಿದ್ದಾರೆ.

ಮಹಾರಾಷ್ಟ್ರದ ಕಾಂಗ್ರೆಸ್‌ ವಕ್ತಾರ ಸಚಿನ್‌ ಸಾವಂತ್‌ ಕೂಡ ನಿತೀಶ್‌ ನಡೆಯನ್ನು ಖಂಡಿಸಿದ್ದಾರೆ.

‘ಮೋದಿ ಸರ್ಕಾರ ಹಾಗೂ ಬಿಜೆಪಿಯು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡಲು ಹೊರಟಿವೆ. ಆ ಕೆಲಸಕ್ಕೆ ಮೋದಿ ಸರ್ಕಾರದ ಪಾಲುದಾರ ಪಕ್ಷಗಳೂ ಕೈಜೋಡಿಸಿರುವುದು ನೋವಿನ ಸಂಗತಿ’ ಎಂದು ಸಾವಂತ್‌ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.