ನವದೆಹಲಿ: ಆರು ದಶಕಗಳ ವೃತ್ತಿಜೀವನದಲ್ಲಿ ಸಂಗೀತ ಪ್ರಿಯರನ್ನು ಮಂತ್ರಮುಗ್ಧರನ್ನಾಗಿಸಿದ ವಿಶ್ವವಿಖ್ಯಾತ ತಬಲಾ ವಾದಕ ಜಾಕಿರ್ ಹುಸೇನ್ (73) ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊದಲ್ಲಿನ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು.
ಭಾರತದ ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರಲ್ಲಿ ಒಬ್ಬರಾದ ಹುಸೇನ್ ಅವರು ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಅವರ ಕುಟುಂಬವು ತಿಳಿಸಿದೆ. ಕಳೆದ ಎರಡು ವಾರಗಳಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ತೀವ್ರ ನಿಗಾ ಘಟಕಕ್ಕೆ (ಐಸಿಯು) ಸ್ಥಳಾಂತರಿಸಲಾಗಿತ್ತು. ‘ವೆಂಟಿಲೇಷನ್ ತೆರವುಗೊಳಿಸಿದ ಬಳಿಕ ಅವರು ನಿಧನರಾದರು’ ಎಂದು ಹುಸೇನ್ ಅವರ ಸಹೋದರಿ ಖುರ್ಷಿದ್ ಔಲಿಯಾ ತಿಳಿಸಿದರು.
‘ಹುಸೇನ್ ನಿಧನರಾದಾಗ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಸಮಯ ಭಾನುವಾರ ಸಂಜೆ 4 ಆಗಿತ್ತು (ಭಾರತೀಯ ಕಾಲಮಾನ ಸೋಮವಾರ ಬೆಳಿಗ್ಗೆ 5.30)’ ಎಂದು ಖುರ್ಷಿದ್ ಔಲಿಯಾ ತಿಳಿಸಿದರು. ತಮ್ಮ ಪೀಳಿಗೆಯ ಶ್ರೇಷ್ಠ ತಬಲಾ ವಾದಕ ಎಂದು ಪರಿಗಣಿಸಲ್ಪಟ್ಟ ಹುಸೇನ್ ಅವರಿಗೆ ಪತ್ನಿ ಆಂಟೋನಿಯಾ ಮಿನೆಕೋಲಾ, ಪುತ್ರಿಯರಾದ ಅನಿಸಾ ಖುರೇಷಿ ಮತ್ತು ಇಸಾಬೆಲ್ಲಾ ಖುರೇಷಿ ಇದ್ದಾರೆ.
‘ಜಗತ್ತಿನಾದ್ಯಂತ ಇರುವ ಅಸಂಖ್ಯಾತ ಸಂಗೀತ ಪ್ರೇಮಿಗಳು ನೆನಪಿನಲ್ಲಿಟ್ಟುಕೊಳ್ಳುವ ಮತ್ತು ಮುಂದಿನ ಹಲವು ತಲೆಮಾರುಗಳ ವರೆಗೆ ಅನುರಣಿಸುವಂತಹ ಅಸಾಧಾರಣ ಪರಂಪರೆಯನ್ನು ಅವರು ಬಿಟ್ಟು ಹೋಗಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ.
ಸಾರ್ವಕಾಲಿಕ ಶ್ರೇಷ್ಠ ತಬಲಾ ವಾದಕ ಎನಿಸಿರುವ ಉಸ್ತಾದ್ ಅಲ್ಲಾ ರಖಾ ಅವರ ಪುತ್ರ ಜಾಕಿರ್, 1951ರ ಮಾರ್ಚ್ 9ರಂದು ಜನಿಸಿದರು. 7 ವರ್ಷ ವಯಸ್ಸಿನಲ್ಲಿ ತಬಲಾ ನುಡಿಸಲು ಆರಂಭಿಸಿದ ಅವರು 12ನೇ ವರ್ಷಕ್ಕೆ ಮೊದಲ ಕಾರ್ಯಕ್ರಮ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.
ತಬಲಾವನ್ನು ತಮ್ಮ ‘ಸಂಗಾತಿ, ಸಹೋದರ ಮತ್ತು ಗೆಳೆಯ’ ಎಂದಿದ್ದ ಅವರು ಅಲ್ಪ ಅವಧಿಯಲ್ಲೇ ಜಾಗತಿಕ ಮನ್ನಣೆ ಗಳಿಸಿ ಸಂಗೀತ ಲೋಕದ ಸಾಮ್ರಾಟರಲ್ಲಿ ಒಬ್ಬರೆನಿಸಿದರು.
(ಜಾಕಿರ್ ಹುಸೇನ್: 1951 ಮಾರ್ಚ್ 9 – 2024 ಡಿಸೆಂಬರ್ 16)
ಸೃಜನಶೀಲತೆ ಮತ್ತು ನಾವೀನ್ಯತೆಗೆ ಹೆಸರುವಾಸಿ ಆಗಿದ್ದ ಜಾಕಿರ್ ಅವರು, ಭಾರತ ಹಾಗೂ ಪಾಶ್ಚಿಮಾತ್ಯ ಸಂಗೀತ ಸಂಪ್ರದಾಯಗಳ ನಡುವಿನ ಕೊಂಡಿಯಾಗಿದ್ದರು.–ದ್ರೌಪದಿ ಮುರ್ಮು, ರಾಷ್ಟ್ರಪತಿ
ಭಾರತೀಯ ಶಾಸ್ತ್ರೀಯ ಸಂಗೀತವನ್ನು ಪಾಶ್ಚಿಮಾತ್ಯ ಸಂಗೀತದೊಂದಿಗೆ ಅತ್ಯಂತ ನಾಜೂಕಿನಿಂದ ಬೆರೆಸಿರುವ ಜಾಕಿರ್, ಸಾಂಸ್ಕೃತಿಕ ಏಕತೆಯ ಐಕಾನ್ ಆಗಿದ್ದಾರೆ.–ನರೇಂದ್ರ ಮೋದಿ, ಪ್ರಧಾನಿ
ಜಾಕಿರ್ ಹುಸೇನ್ ನಿಧನದ ಸುದ್ದಿ ದುಃಖಕರ. ಅವರು ಬಿಟ್ಟುಹೋಗಿರುವ ಸಂಗೀತದ ಭವ್ಯ ಪರಂಪರೆ ನಮ್ಮ ನೆನಪಿನಲ್ಲಿ ಸದಾ ಜೀವಂತವಾಗಿರುತ್ತದೆ.–ರಾಹುಲ್ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.