ADVERTISEMENT

‘ಸುಪ್ರೀಂ’ಗೆ ತಮಿಳುನಾಡು ಮೇಲ್ಮನವಿ

ಮೇಕೆದಾಟು ಯೋಜನೆಗೆ ನೆರೆರಾಜ್ಯದ ತೀವ್ರ ವಿರೋಧ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2018, 19:00 IST
Last Updated 30 ನವೆಂಬರ್ 2018, 19:00 IST
   

ನವದೆಹಲಿ: ಮೇಕೆದಾಟು ಯೋಜನೆಯ ಸಾಧ್ಯತಾ ವರದಿಗೆ ಕೇಂದ್ರದ ಜಲ ಆಯೋಗ (ಸಿಡಬ್ಲ್ಯೂಸಿ) ಸಮ್ಮತಿ ಸೂಚಿಸಿರುವ ಬೆನ್ನಲ್ಲೇ, ಯೋಜನೆ ಕೈಗೆತ್ತಿಕೊಳ್ಳದಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ತಮಿಳುನಾಡು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.

ಬೆಂಗಳೂರು ಮತ್ತು ರಾಮನಗರಗಳಿಗೆ ಕುಡಿಯುವ ನೀರು ಪೂರೈಸುವ ಹಾಗೂ 400 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸುವ ಉದ್ದೇಶದಿಂದ ಯೋಜನೆ ಕೈಗೆತ್ತಿಕೊಳ್ಳುವ ಕರ್ನಾಟಕದ ಪ್ರಸ್ತಾವನೆಗೆ ನವೆಂಬರ್‌ 22ರಂದು ಸಮ್ಮತಿ ಸೂಚಿಸಿರುವ ಸಿಡಬ್ಲ್ಯೂಸಿ, ಪರಿಷ್ಕೃತ ಸಮಗ್ರ ಯೋಜನಾ ವರದಿ ಸಲ್ಲಿಸುವಂತೆ ಸೂಚಿಸಿದೆ.

ಈ ಯೋಜನೆ ಅಡಿ ಕಾವೇರಿ ಕಣಿವೆಯಲ್ಲಿ ಅನಧಿಕೃತವಾಗಿ ಸಮಾನಾಂತರ ಜಲಾಶಯ ನಿರ್ಮಾಣ ಕಾಮಗಾರಿಗಾಗಿ ಕರ್ನಾಟಕ ನೀರಾವರಿ ನಿಗಮ ಪರಿಷ್ಕೃತ ಸಮಗ್ರ ಯೋಜನಾ ವರದಿ ಸಿದ್ಧಪಡಿಸುತ್ತಿದೆ. ವರದಿಯನ್ನು ಸಿದ್ಧಪಡಿಸದಂತೆ ಕರ್ನಾಟಕ ಸರ್ಕಾರವನ್ನು ತಡೆಯಬೇಕು ಎಂದು ಶುಕ್ರವಾರ ಸಲ್ಲಿಸಲಾಗಿರುವ ಮೇಲ್ಮನವಿಯಲ್ಲಿ ಆಗ್ರಹಿಸಲಾಗಿದೆ.

ADVERTISEMENT

ಯೋಜನೆ ಅಡಿ 67.17 ಟಿಎಂಸಿ ಅಡಿ ಹೆಚ್ಚುವರಿ ನೀರು ಸಂಗ್ರಹಿಸಬೇಕೆಂಬ ಕರ್ನಾಟಕದ ಏಕಪಕ್ಷೀಯ ನಿರ್ಧಾರದಿಂದ ಕೃಷಿಗೆ ಕಾವೇರಿ ನೀರನ್ನೇ ನೆಚ್ಚಿರುವ ತಮಿಳುನಾಡು ರೈತರಿಗೆ ಸಾಕಷ್ಟು ತೊಂದರೆ ಎದುರಾಗಲಿದೆ. ಆಕ್ಷೇಪಣೆಗಳ ಅರ್ಜಿ ಇತ್ಯರ್ಥ ಆಗುವವರೆಗೆ ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಬೇಕು ಎಂದೂ ಕೋರಲಾಗಿದೆ.

ಈ ಯೋಜನೆಯ ಮೂಲಕ ಕಾವೇರಿ ನೀರು ತಮಿಳುನಾಡಿಗೆ ಹರಿಯದಂತೆ ತಡೆದು ತನ್ನ ರೈತರ ನೀರಾವರಿ ಪ್ರಮಾಣ ಹೆಚ್ಚಿಸಿಕೊಳ್ಳಲು ಕರ್ನಾಟಕ ಯತ್ನಿಸಿದೆ. ಇದರಿಂದ ಜೂನ್‌ನಿಂದ ಸೆಪ್ಟೆಂಬರ್‌ ಅವಧಿಯಲ್ಲಿನ ಸರಾಗ ಒಳಹರಿವಿಗೆ ಅಡ್ಡಿಯಾಗಲಿದೆ. ಇದು ಕಾವೇರಿ ನದಿ ನೀರು ಹಂಚಿಕೆ ಮಾಡಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಉಲ್ಲಂಘನೆಯಾಗಲಿದೆ ಎಂದು ಆರೋಪಿಸಲಾಗಿದೆ.

ಕಾವೇರಿ ನದಿ ನೀರು ಹಂಚಿಕೆ ಕುರಿತು 1990 ಹಾಗೂ 2018ರಲ್ಲಿ ಸುಪ್ರೀಂ ಕೋರ್ಟ್‌ ಹಾಗೂ 2007ರಲ್ಲಿ ಕಾವೇರಿ ಜಲವಿವಾದ ನ್ಯಾಯಮಂಡಳಿಗಳು ನೀಡಿರುವ ತೀರ್ಪುಗಳನ್ನು ಪುನರ್‌ ಪರಿಶೀಲನೆಗೆ ಒಳಪಡಿಸುವ ಅಗತ್ಯವಿದೆ ಎಂದು ತಿಳಿಸಲಾಗಿದೆ.

**

ರೂಪುರೇಷೆ ಚರ್ಚೆಗೆ ಸಿದ್ಧ: ಡಿಕೆಶಿ

ಬೆಂಗಳೂರು: ‘ಮೇಕೆದಾಟು ಯೋಜನೆಯ ರೂಪುರೇಷೆಗಳು ಹೇಗಿರುತ್ತವೆ ಎಂಬುದನ್ನು ತಮಿಳುನಾಡು ರೈತರೊಂದಿಗೆ ಹಂಚಿಕೊಳ್ಳಲು ಸಿದ್ಧರಿದ್ದೇವೆ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೇಂದ್ರ ಜಲಸಂಪನ್ಮೂಲ ಸಚಿವರ ನೇತೃತ್ವದಲ್ಲೇ ಸಭೆ ಕರೆಯಲಿ. ತಮಿಳುನಾಡು ಸರ್ಕಾರದೊಂದಿಗೆ ಮಾತನಾಡಲೂ ಸಿದ್ಧರಿದ್ದೇವೆ’ ಎಂದರು.

‘ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಹೋಗಿರುವ ಮಾಹಿತಿ ಇದೆ. ಕುಡಿಯುವ ನೀರಿನ ಸಲುವಾಗಿ ಈ ಯೋಜನೆ ರೂಪಿಸಲಾಗುತ್ತಿದೆ. ಈ ಯೋಜನೆಯಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚಿನ‌ ಅನುಕೂಲವಾಗುತ್ತದೆ’ ಎಂದು ಪ್ರತಿಪಾದಿಸಿದರು.

‘ಡಿಸೆಂಬರ್ 6ರಂದು ಮಾಜಿ ಮುಖ್ಯಮಂತ್ರಿಗಳ ಸಭೆ ಕರೆಯಲಾಗಿದೆ. ಆ ಸಭೆಯಲ್ಲೂ ಮೇಕೆದಾಟು ಯೋಜನೆ ಬಗ್ಗೆ ವಿಸ್ತೃತ ಚರ್ಚೆ ನಡೆಸುತ್ತೇವೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.