ಚೆನ್ನೈ: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಸಂಭವಿಸಿದ 11 ಮಕ್ಕಳ ಸಾವಿಗೆ ಕಾರಣ ಎಂದು ಶಂಕಿಸಲಾದ 'ಕೋಲ್ಡ್ರಿಫ್'(Coldrif) ಕೆಮ್ಮಿನ ಸಿರಪ್ ಮಾರಾಟವನ್ನು ನಿಷೇಧಿಸಿ ತಮಿಳುನಾಡು ಸರ್ಕಾರ ಆದೇಶಿಸಿದೆ.
ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ, ಚೆನ್ನೈ ಮೂಲದ ಕಂಪನಿಯು ತಯಾರಿಸಿದ ಈ ಕೆಮ್ಮಿನ ಸಿರಪ್ ಮಾರಾಟವನ್ನು ತಮಿಳುನಾಡಿನಾದ್ಯಂತ ನಿಷೇಧಿಸಲಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಂಪನಿಯು ರಾಜಸ್ಥಾನ, ಮಧ್ಯಪ್ರದೇಶ ಮತ್ತು ಪುದುಚೇರಿಗೆ ಔಷಧಿಗಳನ್ನು ಪೂರೈಸುತ್ತದೆ. ಇದರಲ್ಲಿ 'ಡೈಥಿಲೀನ್ ಗ್ಲೈಕಾಲ್'(Diethylene glycol–DEG) ರಾಸಾಯನಿಕ ಇದೆ ಎನ್ನಲಾಗಿದೆ. ಹಾಗಾಗಿ ಕಾಂಚೀಪುರಂನಲ್ಲಿರುವ ಔಷಧ ಕಂಪನಿಯ ಉತ್ಪಾದನಾ ಘಟಕದಲ್ಲಿ ತಪಾಸಣೆ ನಡೆಸಲಾಗಿದೆ. ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಘಟನೆಗಳು(ಮಕ್ಕಳ ಸಾವು) ವರದಿಯಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ (ಡಿಜಿಎಚ್‌ಎಸ್), ಶುಕ್ರವಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗಳ ಆರೋಗ್ಯ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿದೆ.
‘ಕೆಮ್ಮು ಮತ್ತು ಶೀತಕ್ಕೆ ಸಂಬಂಧಿಸಿದಂತೆ ಎರಡು ವರ್ಷದೊಳಗಿನ ಮಕ್ಕಳಿಗೆ ಔಷಧ ಶಿಫಾರಸು ಮಾಡಬಾರದು. ಐದು ವರ್ಷದೊಳಗಿನ ಮಕ್ಕಳಿಗೂ ಸಾಮಾನ್ಯವಾಗಿ ಅಗತ್ಯ ಇರುವುದಿಲ್ಲ. ಅತಿ ಅಗತ್ಯವಾದರೆ ಮಾತ್ರ ಸೂಕ್ತ ಪ್ರಮಾಣದಲ್ಲಿ ಕಡಿಮೆ ಅವಧಿಗೆ ಒದಗಿಸಬೇಕು’ ಎಂದು ಸೂಚಿಸಿದೆ.
‘ಮಕ್ಕಳಲ್ಲಿನ ಕೆಮ್ಮಿಗೆ ಔಷಧಗಳನ್ನು ವಿವೇಚನೆ ಬಳಸಿ ವೈದ್ಯರು ಶಿಫಾರಸು ಮಾಡಬೇಕು. ಬಹುತೇಕ ಕೆಮ್ಮಿನ ಸಮಸ್ಯೆಗಳು ಔಷಧಗಳ ಅಗತ್ಯವಿಲ್ಲದೆ ಕಡಿಮೆಯಾಗುತ್ತವೆ. ಆದ್ದರಿಂದ ಅನಗತ್ಯವಾಗಿ ಔಷಧ ಬಳಕೆ ತಪ್ಪಿಸಿ, ವೈದ್ಯರ ಸಲಹೆಗಳನ್ನು ಮಾತ್ರ ಪಾಲಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದೂ ತಿಳಿಸಿದೆ.
ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯಲ್ಲಿ ಶಂಕಿತ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳ ಸಾವಿಗೆ ಕೆಮ್ಮಿನ ಸಿರಪ್‌ನಲ್ಲಿದ್ದ 'Brake Oil Solvent' ಕಾರಣ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಕಮಲ್ ನಾಥ್ ಆರೋಪಿಸಿದ್ದರು.
ಮಧ್ಯಪ್ರದೇಶದಲ್ಲಿ 9 ಮತ್ತು ರಾಜಸ್ಥಾನದಲ್ಲಿ 2 ಮಕ್ಕಳು ಮೃತಪಟ್ಟಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.