ADVERTISEMENT

ಹಿಂದಿ ವಿರೋಧಿ ಗೊತ್ತುವಳಿ ಅಂಗೀಕರಿಸಿದ ತಮಿಳುನಾಡು ಸರ್ಕಾರ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2022, 14:38 IST
Last Updated 18 ಅಕ್ಟೋಬರ್ 2022, 14:38 IST
ಎಂ.ಕೆ.ಸ್ಟಾಲಿನ್‌
ಎಂ.ಕೆ.ಸ್ಟಾಲಿನ್‌   

ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಮಂಗಳವಾರ ಹಿಂದಿ ಹೇರಿಕೆ ವಿರೋಧಿ ಗೊತ್ತುವಳಿಯನ್ನು ಅಂಗೀಕರಿಸಲಾಯಿತು.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದ ಅಧಿಕೃತ ಭಾಷೆಗಳ ಬಗೆಗಿನ ಸಂಸದೀಯ ಸ್ಥಾಯಿ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ನಿರ್ಣಯವನ್ನೂ ಕೈಗೊಳ್ಳಲಾಯಿತು.

‘ಅಧಿಕೃತ ಭಾಷೆಗಳ ಬಗೆಗಿನ ಸಂಸದೀಯ ಸ್ಥಾಯಿ ಸಮಿತಿಯ ಶಿಫಾರಸುಗಳು ದ್ವಿಭಾಷಾ ನೀತಿಗೆ ವಿರುದ್ಧವಾಗಿದೆ. ಹಿಂದಿನ ಪ್ರಧಾನಿ ಜವಾಹಾರಲಾಲ್‌ ನೆಹರೂ ಅವರು ಹಿಂದಿಯೇತರ ರಾಜ್ಯಗಳಿಗೆ ನೀಡಿದ್ದ ಭರವಸೆಗೂ ವಿರುದ್ಧವಾಗಿದೆ’ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ವಿಧಾನಸಭೆಗೆ ತಿಳಿಸಿದರು.

ADVERTISEMENT

‘ಬಿಜೆಪಿಯವರ ಮನಸ್ಸು ಹಿಂದಿಗಾಗಿಯೇ ಮಿಡಿಯುತ್ತಿದೆ. ಹಿಂದಿ ಮಾತನಾಡದವರನ್ನು ಅವರು ಮೂರನೇ ದರ್ಜೆಯ ನಾಗರಿಕರಂತೆ ನೋಡುತ್ತಿದ್ದಾರೆ. ಅವರ ಈ ನಡೆಯ ಹಿಂದೆ ಜನರನ್ನು ಇಂಗ್ಲಿಷ್‌ ಜ್ಞಾನದಿಂದ ವಂಚಿತರನ್ನಾಗಿಸುವ ಹುನ್ನಾರ ಅಡಗಿದೆ. ಇದರ ವಿರುದ್ಧ ನಾವು ಧ್ವನಿ ಎತ್ತುತ್ತೇವೆ’ ಎಂದು ಕಿಡಿಕಾರಿದರು.

‘ಮೊದಲು ಆಡಳಿತದಲ್ಲಿ ಹಿಂದಿ ಹೇರಿದ ಬಿಜೆಪಿ ಈಗ ಅದನ್ನು ಶಿಕ್ಷಣ ಸಂಸ್ಥೆಗಳಿಗೆ ವಿಸ್ತರಿಸುತ್ತಿದೆ. ಹಿಂದಿ ಹೇರಿದರೆ ಮಾತ್ರ ತಾನು ಅಧಿಕಾರಕ್ಕೆ ಬರಬಹುದೆಂದು ಆ ಪಕ್ಷ ಭಾವಿಸಿದಂತಿದೆ. ಬಿಜೆಪಿಯು ಹಿಂದಿ ಹೇರಿಕೆ ಮೂಲಕ ಪ್ರಾದೇಶಿಕ ಭಾಷೆಗಳನ್ನು ನಾಶಪಡಿಸಲು ಪ್ರಯತ್ನಿಸುತ್ತಿದೆ’ ಎಂದೂ ದೂರಿದರು.

‘ತಾನು ಎಲ್ಲಾ ಭಾಷೆಗಳನ್ನು ಪ್ರೀತಿಸುತ್ತೇನೆ ಎಂದು ಹೇಳುವ ಬಿಜೆಪಿಯು ತಮಿಳು ಸೇರಿದಂತೆ ಇತರ 22 ಭಾಷೆಗಳನ್ನು ದೇಶದ ಅಧಿಕೃತ ಭಾಷೆಗಳೆಂದು ಘೋಷಿಸಲು ಸಿದ್ಧವಿದೆಯೇ’ ಎಂದೂ ಪ್ರಶ್ನಿಸಿದರು.

‘ಹಿಂದಿ ಭಾಷೆಯನ್ನೇ ಮುಂದಿಟ್ಟುಕೊಂಡು ಬಿಜೆಪಿಯವರು ದೇಶ ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ. ಹಿಂದಿ ಮಾತನಾಡುವ, ಹಿಂದಿ ಬಳಕೆ ಕಡಿಮೆ ಇರುವ, ಹಿಂದಿ ಬಳಕೆಯೇ ಇರದ ರಾಜ್ಯಗಳೆಂದು ವಿಂಗಡಿಸಲು ಮುಂದಾಗಿದ್ದಾರೆ’ ಎಂದೂ ಆರೋಪಿಸಿದ್ದಾರೆ.

ಸ್ಟಾಲಿನ್‌ ಅವರು ಗೊತ್ತುವಳಿ ಮಂಡಿಸುತ್ತಿದ್ದಂತೆ ಬಿಜೆಪಿಸದಸ್ಯರು ಸಭಾತ್ಯಾಗ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.