
ಎಂ.ಕೆ. ಸ್ಟಾಲಿನ್, ರಾಹುಲ್ ಗಾಂಧಿ
ಸಂಗ್ರಹ ಚಿತ್ರ
ದಿಂಡಿಗಲ್ (ತಮಿಳುನಾಡು): ರಾಜ್ಯದಲ್ಲಿ ಡಿಎಂಕೆ ಮಿತ್ರಪಕ್ಷಗಳೊಂದಿಗೆ ಅಧಿಕಾರ ಹಂಚಿಕೊಳ್ಳಬೇಕು ಎಂಬ ಕಾಂಗ್ರೆಸ್ ಬೇಡಿಕೆಯನ್ನು ಡಿಎಂಕೆ ಭಾನುವಾರ ತಿರಸ್ಕರಿಸಿದೆ.
ತಮಿಳುನಾಡಿನಲ್ಲಿ ಮೈತ್ರಿ ಸರ್ಕಾರಕ್ಕೆ ಯಾವುದೇ ಅವಕಾಶವಿಲ್ಲ, ಮಿತ್ರ ಪಕ್ಷಗಳೊಂದಿಗೆ ಅಧಿಕಾರ ಹಂಚಿಕೊಳ್ಳುವುದು ಅಸಾಧ್ಯ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ದೃಢ ನಿಲುವು ಹೊಂದಿದ್ದಾರೆ ಎಂದು ಸಚಿವ ಪೆರಿಯಸಾಮಿ ಸ್ಪಷ್ಟಪಡಿಸಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಧಿಕಾರವನ್ನು ಹಂಚಿಕೊಳ್ಳಬೇಕು ಎಂದು ಕಾಂಗ್ರೆಸ್ ಬೇಡಿಕೆ ಇಟ್ಟಿದೆ. ಕೇಳುವ ಹಕ್ಕು ಕಾಂಗ್ರೆಸ್‌ಗೆ ಇದೆ. ಆದರೆ ಡಿಎಂಕೆ ಎಂದಿಗೂ ಇಂತಹ ಪ್ರಸ್ತಾವಕ್ಕೆ ಒಪ್ಪಿಕೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಇವರೆಗೂ ಯಾವುದೇ ಮೈತ್ರಿ ಸರ್ಕಾರ ರಚನೆಯಾಗಿಲ್ಲ, ಡಿಎಂಕೆ ಸ್ವತಂತ್ರವಾಗಿ ಆಡಳಿತ ನಡೆಸಿದೆ. ಪಕ್ಷದ ನಿಲುವಿನಲ್ಲಿ ಯಾವುದೇ ಅನುಮಾನವಿಲ್ಲ. ಮುಖ್ಯಮಂತ್ರಿಗಳು ತಮ್ಮ ನಿಲುವಿಗೆ ಬದ್ಧರಾಗಿದ್ದಾರೆ ಎಂದು ಸಚಿವರು ಹೇಳಿದರು.
ಬರಲಿರುವ ಮಾರ್ಚ್–ಏಪ್ರಿಲ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ಡಿಎಂಕೆ ನೇತೃತ್ವದ ಮೈತ್ರಿಕೂಟ ಗೆದ್ದರೆ ಅಧಿಕಾರದಲ್ಲಿ ಪಾಲು ನೀಡಬೇಕು ಎಂದು ತಮಿಳುನಾಡು ಕಾಂಗ್ರೆಸ್ ಒತ್ತಾಯಿಸಿದೆ.
ಇತ್ತೀಚೆಗೆ ಕಾಂಗ್ರೆಸ್ ಸಂಸದ ಮಣಿಕಂ ಟಾಗೋರ್ ಅವರು ಅಧಿಕಾರ ಹಂಚಿಕೆ ಕುರಿತು ಚರ್ಚೆ ನಡೆಯಬೇಕಾದ ಸಮಯ ಈಗ ಬಂದಿದೆ ಎಂದು ಹೇಳಿದ್ದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಶಾಸಕ ಎಸ್. ರಾಜೇಶ್ ಕುಮಾರ್ ಕೂಡ ಮೈತ್ರಿ ಸರ್ಕಾರದಲ್ಲಿ ಅಧಿಕಾರ ಹಂಚಿಕೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಯಾವುದೇ ರಾಜಕೀಯ ಪಕ್ಷಗಳು ನಮಗೆ ಅಧಿಕಾರ ಬೇಡ ಎಂದು ಹೇಳುತ್ತವೆಯೇ? ಎಂದು ತಮಿಳುನಾಡು ಕಾಂಗ್ರೆಸ್ ಉಸ್ತುವಾರಿ ಗಿರೀಶ್ ಚೋದಂಕರ್ ಅವರು ಪ್ರಶ್ನೆ ಮಾಡಿದ್ದರು.
1967ರಿಂದ ಡಿಎಂಕೆ ಹಾಗೂ ಎಐಎಡಿಎಂಕೆ ಇತರ ಪಕ್ಷಗಳೊಂದಿಗೆ ಮೈತ್ರಿಮಾಡಿಕೊಂಡು ಚುನಾವಣೆ ಎದುರಿಸಿದರೂ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಿವೆ. 2006ರಲ್ಲಿ ಡಿಎಂಕೆ ಬಹುಮತ ಪಡೆಯದಿದ್ದರೂ ಮಿತ್ರಪಕ್ಷಗಳ ಸಹಕಾರದೊಂದಿಗೆ ಸರ್ಕಾರ ರಚನೆ ಮಾಡಿತ್ತು. ಆದಾಗ್ಯೂ ಕಾಂಗ್ರೆಸ್‌ಗೆ ಅಧಿಕಾರ ಹಂಚಿಕೆ ಮಾಡಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.