ADVERTISEMENT

ತಮಿಳುನಾಡಿನಲ್ಲಿ ಎಐಎಡಿಎಂಕೆ ನೇತೃತ್ವದಲ್ಲಿ ಎನ್‌ಡಿಎ ಅಧಿಕಾರಕ್ಕೆ: ಸಚಿವ ಗೋಯಲ್‌

ಪಿಟಿಐ
Published 22 ಜನವರಿ 2026, 7:36 IST
Last Updated 22 ಜನವರಿ 2026, 7:36 IST
<div class="paragraphs"><p>ಪಳನಿಸ್ವಾಮಿ, ಪೀಯೂಷ್‌ ಗೋಯಲ್‌</p></div>

ಪಳನಿಸ್ವಾಮಿ, ಪೀಯೂಷ್‌ ಗೋಯಲ್‌

   

ಚೆನ್ನೈ: ತಮಿಳುನಾಡಿನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಲಿಷ್ಠ ಎಐಎಡಿಎಂಕೆ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂದು ತಮಿಳುನಾಡು ಬಿಜೆಪಿ ಚುನಾವಣಾ ಉಸ್ತುವಾರಿ ಪೀಯೂಷ್‌ ಗೋಯಲ್‌ ಹೇಳಿದರು.

ಚುನಾವಣೆ ಸಂಬಂಧ ಎಐಎಡಿಎಂಕೆ ಜೊತೆ ಮಾತುಕತೆ ನಡೆಸಲು ಇಲ್ಲಿಗೆ ಆಗಮಿಸಿರುವ ಪೀಯೂಷ್‌ ಗೋಯಲ್‌ ಅವರು ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದರು.

ADVERTISEMENT

ಏಪ್ರಿಲ್‌ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ಸಲ ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂದು ಪೀಯೂಷ್‌ ಗೋಯಲ್‌ ವಿಶ್ವಾಸ ವ್ಯಕ್ತಪಡಿಸಿದರು. 

ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಪಳನಿಸ್ವಾಮಿ ಅವರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಎನ್‌ಡಿಎ ಮೈತ್ರಿಕೂಟ ಡಿಎಂಕೆ ಪಕ್ಷದ ಭ್ರಷ್ಟ ಹಾಗೂ ವಂಶಪಾರಂಪರ್ಯ ಆಡಳಿತಕ್ಕೆ ತೆರೆ ಎಳೆಯಲಿದೆ. ಜನರ ಕಲ್ಯಾಣಕ್ಕಾಗಿ ಶ್ರಮಿಸಿ ತಮಿಳುನಾಡಿನ ಗೌರವವನ್ನು ಪುನರ್‌ ಸ್ಥಾಪಿಸಲಿದೆ ಎಂದರು.

ನಾಳೆ (ಜ.23) ಚೆನ್ನೈ ಸಮೀಪ ನಡೆಯಲಿರುವ ಚುನಾವಣೆ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ಈ ರ‍್ಯಾಲಿ ತಮಿಳುನಾಡು ರಾಜಕೀಯದಲ್ಲಿ ಮಹತ್ವದ ತಿರುವು ಪಡೆಯಲಿದೆ. ಹಾಗೂ ಭ್ರಷ್ಟ ಡಿಎಂಕೆ ಆಡಳಿತದ ಸೋಲಿಗೆ ದಾರಿ ಮಾಡಿಕೊಡಲಿದೆ ಎಂದು ಪಳನಿಸ್ವಾಮಿ ಹೇಳಿದರು.

ಇಂದು ಉಭಯ ನಾಯಕರು ಸ್ಥಾನ ಹಂಚಿಕೆ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ತಮಿಳುನಾಡಿನಲ್ಲಿ ಎನ್‌ಡಿಎಗೆ ಎಐಎಡಿಎಂಕೆ ನಾಯಕತ್ವ ವಹಿಸಿದೆ. ಈ ವೈತ್ರಿಕೂಟದಲ್ಲಿ ಬಿಜೆಪಿ, ಪಿಎಂಕೆ (ಅನ್ಬುಮಣಿ ಬಣ), ಎಎಂಎಂಕೆ ಹಾಗೂ ಟಿಎಂಸಿ (ಎಂ) ಪಕ್ಷಗಳು ಸೇರಿವೆ. 

ಸನಾತನ ಧರ್ಮ ಕುರಿತು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್‌ ಅವರು ಮಾಡಿರುವ ಭಾಷಣದ ಬಗ್ಗೆ ಮದ್ರಾಸ್‌ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿದ್ದು ಅವಹೇಳನ ಸಲ ಎಂದು ಹೇಳಿದೆ. ಕೂಡಲೇ ಉದಯನಿಧಿ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಪೀಯೂಷ್‌ ಗೋಯಲ್‌ ಆಗ್ರಹಿಸಿದರು. 

ಉದಯನಿಧಿ ಅವರ ರಾಷ್ಟ್ರವಿರೋಧಿ ಹೇಳಿಕೆಗಳನ್ನು ನಾನು ಸಂಪೂರ್ಣವಾಗಿ ವಿರೋಧಿಸುತ್ತೇನೆ, ಜನರನ್ನು ವಿಭಜಿಸಿ ಅಶಾಂತಿ ಉಂಟುಮಾಡುವ ಅವರ ದ್ವೇಷ ಭಾಷಣದ ಕುರಿತು ಕ್ರಮ ಕೈಗೊಂಡು ಅವರನ್ನು ಸರ್ಕಾರದಿಂದ ವಜಾ ಮಾಡಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.