ತಿರುಚಿರಾಪಳ್ಳಿ ಜಿಲ್ಲೆಯ ಸಮಯಾಪುರಂನ ‘ಅರಳ್ಮಿಗು ಮಾರಿಯಮ್ಮನ್’ ದೇವಾಲಯ
ಚೆನ್ನೈ: ಭಕ್ತರು ದೇವಾಲಯಗಳಿಗೆ ನೀಡಿದ ಆದರೆ ಬಳಸಲಾಗದ ಸುಮಾರು 1 ಟನ್‌ಗೂ (ಒಂದು ಸಾವಿರ ಕೆಜಿಗೂ ಅಧಿಕ) ಅಧಿಕ ಚಿನ್ನವನ್ನು ಕರಗಿಸಿ 24 ಕ್ಯಾರೆಟ್‌ನ ಬಿಸ್ಕತ್ತುಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ತಮಿಳುನಾಡು ಸರ್ಕಾರದ ಮುಜರಾಯಿ ಇಲಾಖೆ ತಿಳಿಸಿದೆ.
ಹೀಗೆ ಬಿಸ್ಕ್‌ತ್ತಗಳನ್ನಾಗಿ ಪರಿವರ್ತಿಸಲಾದ 1 ಟನ್‌ಗೂ ಅಧಿಕ ಚಿನ್ನವನ್ನು ಬ್ಯಾಂಕುಗಳಲ್ಲಿ ಠೇವಣಿ (ಚಿನ್ನದ ಹೂಡಿಕೆ) ಇಡಲಾಗಿದೆ ಎಂದು ತಿಳಿಸಿದೆ.
ಚಿನ್ನದ ಠೇವಣಿಯಿಂದ ಬ್ಯಾಂಕುಗಳಿಂದ ವಾರ್ಷಿಕವಾಗಿ ₹17.82 ಕೋಟಿ ಬಡ್ಡಿ ಬರುತ್ತದೆ. ಈ ಬಡ್ಡಿ ಹಣವನ್ನು ಸಂಬಂಧಿತ ದೇವಾಲಯಗಳ ಅಭಿವೃದ್ಧಿಗೆ ಬಳಸಲಾಗುತ್ತದೆ. ಕಳೆದ ಮಾರ್ಚ್ 31 ರಂದು ಎಲ್ಲ ಚಿನ್ನವನ್ನು (10,74,123.488 ಗ್ರಾಂಗಳು) ಠೇವಣಿ ಇಡಲಾಗಿದೆ ಎಂದು ತಮಿಳುನಾಡು ಮುಜರಾಯಿ ಸಚಿವ ಪಿ.ಕೆ. ಶೇಖರ್ ಬಾಬು ತಿಳಿಸಿದ್ದಾರೆ.
ತಮಿಳುನಾಡಿನ 21 ಹಿಂದೂ ದೇವಾಲಯಗಳಿಗೆ ಈ ಎಲ್ಲ ಚಿನ್ನ ಸೇರಿದೆ. ಅದರಲ್ಲಿ ತಿರುಚಿರಾಪಳ್ಳಿ ಜಿಲ್ಲೆಯ ಸಮಯಾಪುರಂನ ‘ಅರಳ್ಮಿಗು ಮಾರಿಯಮ್ಮನ್’ ದೇವಾಲಯದ ಚಿನ್ನವೇ ಜಾಸ್ತಿ ಇದೆ. 426.26 ಕೆ.ಜಿ ಚಿನ್ನವನ್ನು ಆ ದೇವಾಲಯದವರು ನೀಡಿದ್ದಾರೆ ಎಂದು ವಿವರಿಸಿದ್ದಾರೆ.
ಭಕ್ತರು ದೇವಾಲಯಗಳಿಗೆ ಆಭರಣ ಅಥವಾ ಮತ್ತೊಂದು ರೂಪದಲ್ಲಿ ನೀಡಲಾದ ಆದರೆ, ಅವುಗಳನ್ನು ದೇವರು/ದೇವತೆಗಳಿಗೆ ಬಳಸದೇ ತೆಗೆದು ಇಟ್ಟಿದ್ದ ಚಿನ್ನವನ್ನು ಮಾತ್ರ ಈ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ ಎಂದು ಶೇಖರ್ ಬಾಬು ತಿಳಿಸಿದ್ದಾರೆ.
21 ಹಿಂದೂ ದೇವಾಲಯಗಳಿಂದ ಪಡೆಯಲಾದ ಚಿನ್ನವನ್ನು ಮುಂಬೈನ ಸರ್ಕಾರಿ ಟಂಕಸಾಲೆಯಲ್ಲಿ ಕರಗಿಸಿ ಚಿನ್ನದ ಬಿಸ್ಕತ್ತುಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ತಿಳಿಸಿದ್ದಾರೆ.
ಒಟ್ಟಾರೆ ಈ ಕಾರ್ಯವನ್ನು ಮೇಲುಸ್ತುವಾರಿ ಮಾಡಲು ಮೂರು ಸಮಿತಿಗಳನ್ನು ರಚಿಸಲಾಗಿದೆ. ಪ್ರತಿ ಸಮಿತಿಗೂ ನಿವೃತ್ತ ನ್ಯಾಯಮೂರ್ತಿ ಮುಖ್ಯಸ್ಥರಾಗಿರುತ್ತಾರೆ. ದೇವಾಲಯಗಳನ್ನು ಪ್ರಾದೇಶಿಕವಾರು ವಿಂಗಡಿಸಿ ಸಮಿತಿಗಳನ್ನು ನೇಮಿಸಲಾಗಿದೆ ಎಂದು ಬಾಬು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.