ADVERTISEMENT

ತಮಿಳುನಾಡು ಲಾಕಪ್‌ ಡೆತ್ ಪ್ರಕರಣ: ನ್ಯಾಯಾಂಗ ತನಿಖೆಗೆ ಹೈಕೋರ್ಟ್ ಆದೇಶ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 6:04 IST
Last Updated 1 ಜುಲೈ 2025, 6:04 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಚೆನ್ನೈ: ಶಿವಗಂಗಾ ಜಿಲ್ಲೆಯಲ್ಲಿ ದೇವಾಲಯದ ಕಾವಲುಗಾರನ ಮೇಲೆ ‘ವಿಶೇಷ ತಂಡ’ದ ಆರು ಪೊಲೀಸರ ಗುಂಪು ನಡೆಸಿದ ಚಿತ್ರಹಿಂಸೆ ಮತ್ತು ನಂತರದ ಸಾವಿನ ಪ್ರಕರಣವನ್ನು ತಪ್ಪಾಗಿ ನಿರ್ವಹಿಸಿದ್ದಕ್ಕಾಗಿ ತಮಿಳುನಾಡು ಸರ್ಕಾರವನ್ನು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಮಂಗಳವಾರ ತೀವ್ರವಾಗಿ ಟೀಕಿಸಿದ್ದು, ಪ್ರಕರಣದ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಿದೆ.

ತೀವ್ರ ಟೀಕೆ ವ್ಯಕ್ತವಾದ ಬೆನ್ನಲ್ಲೇ ಡಿಎಂಕೆ ನೇತೃತ್ವದ ಸರ್ಕಾರವು ಶಿವಗಂಗಾ ಪೊಲೀಸ್ ವರಿಷ್ಠಾಧಿಕಾರಿ ಆಶಿಶ್ ರಾವತ್‌ರನ್ನು ಸ್ಥಳ ತೋರಿಸದೇ ವರ್ಗಾವಣೆ ಮಾಡಿದೆ. ಕಾಣೆಯಾದ ಚಿನ್ನದ ಆಭರಣಗಳ ಪ್ರಕರಣವನ್ನು ತನಿಖೆ ಮಾಡಲು ವಿಶೇಷ ತಂಡವನ್ನು ರಚಿಸಿದ್ದ ಮನಮದುರೈ ಉಪ-ಪೊಲೀಸ್ ವರಿಷ್ಠಾಧಿಕಾರಿ ಶಣ್ಮುಗಸುಂದರಂ ಅವರನ್ನು ಅಮಾನತುಗೊಳಿಸಲಾಗಿದೆ. 

ADVERTISEMENT

ಘಟನೆ ಬಹಿರಂಗವಾದ ಎರಡು ದಿನಗಳ ಬಳಿಕ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌, ‘ 27 ವರ್ಷದ ಬಿ. ಅಜಿತ್ ಕುಮಾರ್ ಮೇಲೆ ನಡೆಸಲಾದ ‘ಕ್ರೂರ ಕೃತ್ಯ’ವನ್ನು ಯಾರೂ ಸಮರ್ಥಿಸಲು ಸಾಧ್ಯವಿಲ್ಲ. ತಪ್ಪು ಮಾಡಿದ ಪೊಲೀಸರಿಗೆ ಶಿಕ್ಷೆಯಾಗುವಂತೆ ನನ್ನ ಸರ್ಕಾರ ಕ್ರಮ ಕೈಗೊಳ್ಳಲಿದೆ. ಸಂತ್ರಸ್ತನ ಕುಟುಂಬದ ಜೊತೆ ನಿಲ್ಲುತ್ತೇವೆ’ ಎಂದು ತಮ್ಮ ‘ಎಕ್ಸ್’ ಖಾತೆಯಲ್ಲಿ ಬರೆದು ಸಂತ್ರಸ್ತನ ಕುಟುಂಬದೊಂದಿಗೆ ಅವರು ನಡೆಸಿದ ದೂರವಾಣಿ ಸಂಭಾಷಣೆಯ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ನ್ಯಾಯಮೂರ್ತಿಗಳಾದ ಎಸ್.ಎಂ. ಸುಬ್ರಮಣಿಯಂ ಮತ್ತು ಎ.ಡಿ. ಮಾರಿಯಾ ಕ್ಲೀಟ್ ಅವರಿದ್ದ ಪೀಠವು, ಸಂತ್ರಸ್ತನನ್ನು ಥಳಿಸಿದ ಆರೋಪ ಹೊತ್ತಿರುವ ಪೊಲೀಸರನ್ನು ಅಮಾನತುಗೊಳಿಸಿ ಬಂಧಿಸದೇ ಇರುವುದು ಮತ್ತು ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದೇ ಇರುವುದಕ್ದಾಗಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

ಪೊಲೀಸರಿಂದ ಚಿತ್ರಹಿಂಸೆಗೊಳಗಾಗಿ ಮೃತಪಟ್ಟ ಅಜಿತ್ ಕುಮಾರ್‌ ಅವರು ಶಿವಗಂಗಾ ಜಿಲ್ಲೆಯ ತಿರುಪುವಣಂನಲ್ಲಿರುವ ಮಾದಾಪುರಂ ಭದ್ರಕಾಳಿಯಮ್ಮನ್ ದೇವಸ್ಥಾನದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ತಮ್ಮ ಕಾರಿನಿಂದ 10 ಪೌಂಡ್ ಚಿನ್ನ ಕಾಣೆಯಾಗಿದೆ ಎಂದು ತಾಯಿ-ಮಗಳು ನೀಡಿದ ದೂರಿನ ಮೇರೆಗೆ, ಕಳವಿನಲ್ಲಿ ಅಜಿತ್ ಕುಮಾರ್ ಪಾತ್ರವಿದೆಯೇ ಎಂದು ತನಿಖೆ ಮಾಡಲು ರಚಿಸಲಾದ ‘ವಿಶೇಷ ತಂಡ’ದ ಆರು ಪೊಲೀಸರಿಂದ ಚಿತ್ರಹಿಂಸೆಗೊಳಗಾಗಿ ಅವರು ಸಾವನ್ನಪ್ಪಿದ್ದರು ಎಂಬ ಆರೋಪವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.