
ಚೆನ್ನೈ: ತಮಿಳುನಾಡು ಸರ್ಕಾರಿ ನೌಕರರು ಮತ್ತು ಶಿಕ್ಷಕರಿಗೆ ಹೊಸ ಪಿಂಚಣಿ ಯೋಜನೆಯನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಶನಿವಾರ ಘೋಷಿಸಿದ್ದಾರೆ.
‘ತಮಿಳುನಾಡು ಹೊಸ ಪಿಂಚಣಿ ಖಾತರಿ ಯೋಜನೆ’ಯನ್ನು ಘೋಷಿಸುವ ಮೂಲಕ ಎರಡು ದಶಕಗಳಷ್ಟು ಹಳೆಯದಾದ ಬೇಡಿಕೆಯನ್ನು ಅವರು ಈಡೇರಿಸಿದ್ದಾರೆ.
ಸರ್ಕಾರಿ ನೌಕರರ ಕೊನೆಯ ವೇತನದ ಶೇಕಡ 50ರಷ್ಟು ಪಿಂಚಣಿ ದೊರೆಯಲಿದೆ. ಈ ಹೊಸ ಪಿಂಚಣಿ ಯೋಜನೆಯಲ್ಲಿ ಹಳೆಯ ಪಿಂಚಣಿ ಯೋಜನೆಯ ಪ್ರಯೋಜನಗಳೂ ಸೇರಿವೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಉದ್ದೇಶಕ್ಕಾಗಿ, ರಾಜ್ಯ ಸರ್ಕಾರವು ನೌಕರರ ಶೇಕಡ 10 ರಷ್ಟು ಕೊಡುಗೆಯ ಜೊತೆಗೆ, ಪಿಂಚಣಿ ನಿಧಿಗೆ ಅಗತ್ಯವಿರುವ ಸಂಪೂರ್ಣ ಹೆಚ್ಚುವರಿ ಹಣವನ್ನು ಒದಗಿಸುತ್ತದೆ.
ಶೇಕಡ 50 ರಷ್ಟು ಪಿಂಚಣಿ ಪಡೆಯುವ ಪಿಂಚಣಿದಾರರಿಗೆ ಸರ್ಕಾರಿ ನೌಕರರಂತೆಯೇ ಪ್ರತಿ ಆರು ತಿಂಗಳಿಗೊಮ್ಮೆ ತುಟ್ಟಿ ಭತ್ಯೆ ಹೆಚ್ಚಳದ ಸೌಲಭ್ಯವೂ ಇರಲಿದೆ. ಪಿಂಚಣಿದಾರರು ಮೃತಪಟ್ಟರೆ, ಮೃತರ ನಾಮನಿರ್ದೇಶಿತರಿಗೆ ಪಿಂಚಣಿ ಮೊತ್ತದ ಶೇ 60ರಷ್ಟು ಹಣವನ್ನು ಕುಟುಂಬ ಪಿಂಚಣಿಯಾಗಿ ನೀಡಲಾಗುತ್ತದೆ.
ನೌಕರರೊಬ್ಬರು ಸೇವಾವಧಿಯಲ್ಲಿ ಮೃತಪಟ್ಟರೆ ಅಥವಾ ನಿವೃತ್ತಿಯ ಸಮಯದಲ್ಲಿ ಮರಣ ಹೊಂದಿದರೆ ಅವರ ಉಳಿದ ಸೇವಾವಧಿಗೆ ಅನುಗುಣವಾಗಿ ಗರಿಷ್ಠ ₹25 ಲಕ್ಷದವರೆಗೆ (ಡೆತ್ ಗ್ರಾಚ್ಯುಟಿ) ನೀಡಲಾಗುವುದು. ಹೊಸ ಪಿಂಚಣಿ ಯೋಜನೆ ಜಾರಿಯಾದ ನಂತರ, ಪಿಂಚಣಿ ಪಡೆಯಲು ಅರ್ಹತಾ ಸೇವಾ ಅವಧಿಯನ್ನು ಪೂರ್ಣಗೊಳಿಸದೆ ನಿವೃತ್ತರಾಗುವ ಎಲ್ಲರಿಗೂ ಕನಿಷ್ಠ ಪಿಂಚಣಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.