
ಚೆನ್ನೈ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಡಿಎಂಕೆ ಮತ್ತು ಅದರ ಮೈತ್ರಿ ಪಕ್ಷಗಳು ತಮಿಳುನಾಡಿನಾದ್ಯಂತ ಮಂಗಳವಾರ ಪ್ರತಿಭಟಿಸಿದವು.
‘ಚುನಾವಣಾ ಆಯೋಗ ಕೈಗೊಂಡಿರುವ ಎಸ್‌ಐಆರ್ ಪ್ರಕ್ರಿಯೆಯನ್ನು ತಡೆಯುವುದು ಕಾರ್ಯಕರ್ತರ ಪ್ರಮುಖ ಕರ್ತವ್ಯವಾಗಬೇಕಿದೆ’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಈ ಸಂದರ್ಭದಲ್ಲಿ ಹೇಳಿದರು.
‘ಪ್ರಜಾಪ್ರಭುತ್ವದ ಮೂಲಹಕ್ಕನ್ನು ಎಸ್‌ಐಆರ್ ಕಸಿದುಕೊಳ್ಳಲಿದೆ. ಆದ್ದರಿಂದ ಇದರ ವಿರುದ್ಧ ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳು ಕಾನೂನಾತ್ಮಕವಾಗಿ ಹಾಗೂ ಬೀದಿಗಿಳಿದು ಹೋರಾಟ ನಡೆಸಲಿವೆ’ ಎಂದು ‘ಎಕ್ಸ್’ನಲ್ಲಿ ಉಲ್ಲೇಖಿಸಿದ್ದಾರೆ.
‘ರಾಜ್ಯದಲ್ಲಿ ಎಸ್‌ಐಆರ್ ಆರಂಭವಾಗಿದೆ. ಈ ಪ್ರಕ್ರಿಯೆಯಲ್ಲಿ ನಡೆಯುವ ಅಕ್ರಮ ತಡೆಗಟ್ಟಲಿಕ್ಕಾಗಿಯೇ ನಾವು ಈಗಾಗಲೇ ಸಹಾಯವಾಣಿ ಆರಂಭಿಸಿದ್ದೇವೆ. ಜಾತ್ಯತೀತ ಪ್ರಗತಿಪರ ಒಕ್ಕೂಟದ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟಿಸಿದ್ದಾರೆ. ನಮ್ಮ ಜನರ ಮತದಾನದ ಹಕ್ಕನ್ನು ರಕ್ಷಿಸಲಿಕ್ಕಾಗಿ ಹೋರಾಟ ಮುಂದುವರಿಸೋಣ’ ಎಂದಿದ್ದಾರೆ.
ರಾಜ್ಯದ ಎಲ್ಲೆಡೆ ಪ್ರತಿಭಟಿಸಿದ ಡಿಎಂಕೆ, ಕಾಂಗ್ರೆಸ್, ವಿಸಿಕೆ ಮತ್ತು ಎಡಪಕ್ಷಗಳ ಮುಖಂಡರು, ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆವರೆಗೂ ಎಸ್‌ಐಆರ್ ಪ್ರಕ್ರಿಯೆ ಮುಂದೂಡಬೇಕು ಎಂದು ಆಗ್ರಹಿಸಿದರು.
‘ಇದು ಭಾರತದ ಚುನಾವಣಾ ಆಯೋಗವೋ ಅಥವಾ ಮೋದಿ ಚುನಾವಣಾ ಆಯೋಗವೋ,’ ‘ಚುನಾವಣಾ ಆಯೋಗವು ಬಿಜೆಪಿಯ ಒಂದು ವಿಭಾಗದಂತೆ ಕಾರ್ಯನಿರ್ವಹಿಸುತ್ತಿದೆ’ ಎಂದು ಘೋಷಣೆಗಳನ್ನು ಕೂಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.