ಎಐ ಚಿತ್ರ (ಸಾಂದರ್ಭಿಕ ಚಿತ್ರ)
ಚೆನ್ನೈ: 21ಲಕ್ಷಕ್ಕೂ ಅಧಿಕ ಮಂದಿ ವೃದ್ಧರು ಮತ್ತು ಅಂಗವಿಕಲರ ಮನೆ ಬಾಗಿಲಿಗೆ ಪಡಿತರ ಸಾಮಗ್ರಿಗಳನ್ನು ತಲುಪಿಸುವ ವಿನೂತನ ಯೋಜನೆಯನ್ನು ಜಾರಿಗೆ ತರಲು ತಮಿಳುನಾಡು ಸರ್ಕಾರ ಮುಂದಾಗಿದೆ.
ಈ ಕಾರ್ಯಕ್ರಮವನ್ನು ಇಂದು (ಮಂಗಳವಾರ) ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಉದ್ಘಾಟಿಸಲಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
'ಮುಖ್ಯಮಂತ್ರಿಗಳ ಥಾಯುಮನವರ್ ಯೋಜನೆ'ಯನ್ನು ಸ್ಟಾಲಿನ್ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಡಿ ಅಕ್ಕಿ ಮತ್ತು ಸಕ್ಕರೆ ಸೇರಿದಂತೆ ಪಡಿತರ ಸಾಮಗ್ರಿಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ ಎಂದು ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.
70 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಅಂಗವಿಕಲರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.
ಸುಮಾರು 20.42 ಲಕ್ಷ ಹಿರಿಯ ನಾಗರಿಕರು ಮತ್ತು 1.27 ಲಕ್ಷಕ್ಕೂ ಹೆಚ್ಚು ಅಂಗವಿಕಲರು ಈ ಯೋಜನೆಯಡಿ ಪ್ರಯೋಜನ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.
ತಿಂಗಳ ಪ್ರತಿ ಎರಡನೇ ಶನಿವಾರ ಮತ್ತು ಭಾನುವಾರ ಫಲಾನುಭವಿಗಳಿಗೆ ಪಡಿತರ ಸಾಮಗ್ರಿಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುವುದು. ಇದಕ್ಕೆ ಸಂಬಂಧಿತ ವಿವರಗಳನ್ನು ಈಗಾಗಲೇ ಆಹಾರ ಮತ್ತು ಗ್ರಾಹಕ ಸಂರಕ್ಷಣಾ ಇಲಾಖೆಯಿಂದ ಸ್ವೀಕರಿಸಲಾಗಿದೆ. ಈ ಕಾರ್ಯಕ್ರಮದಿಂದ ಸರ್ಕಾರಕ್ಕೆ ₹30.16 ಕೋಟಿ ಹೊರೆಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.