ಅಮೆರಿಕ-ಭಾರತ
(ಐಸ್ಟೋಕ್ ಸಾಂದರ್ಭಿಕ ಚಿತ್ರ)
ನವದೆಹಲಿ: ಅಮೆರಿಕವು ಭಾರತದ ಸರಕುಗಳ ಮೇಲೆ ವಿಧಿಸಿರುವ ಭಾರಿ ಪ್ರಮಾಣದ ಸುಂಕದ ಕಾರಣದಿಂದಾಗಿ ತೊಂದರೆಗೆ ಒಳಗಾಗಬಹುದಾದ ಕ್ಷೇತ್ರಗಳಿಗೆ ಬೆಂಬಲವಾಗಿ ನಿಲ್ಲಲು ಸರ್ಕಾರ ವಿವಿಧ ಕ್ರಮಗಳಿಗೆ ಮುಂದಾಗಲಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
‘ರಫ್ತುದಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರವು ಗಮನ ಹರಿಸಿದೆ. ಅವರಿಗೆ ಸಹಾಯ ಮಾಡಲು ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆ ಆರಂಭಿಸಿದೆ’ ಎಂದು ಹೇಳಿದ್ದಾರೆ.
ರಫ್ತು ಉತ್ತೇಜನ ಯೋಜನೆ ಜಾರಿಗೊಳಿಸುವುದು, ರಫ್ತು ಪ್ರಕ್ರಿಯೆಯಲ್ಲಿ ವೈವಿಧ್ಯತೆ ತರುವುದು, ಸಾಲ ಮರುಪಾವತಿ ಅವಧಿ ವಿಸ್ತರಣೆ, ಹೊಸ ಮುಕ್ತ ವ್ಯಾಪಾರ ಒಪ್ಪಂದಗಳ (ಎಫ್‌ಟಿಎ) ಅನುಷ್ಠಾನ ಸೇರಿದಂತೆ ವಿವಿಧ ಕ್ರಮಗಳನ್ನು ಜಾರಿಗೊಳಿಸಲು ತಯಾರಿ ನಡೆದಿದೆ. ಅಮೆರಿಕವು ಶೇ 50ರಷ್ಟು ಸುಂಕ ಹೇರಿರುವುದಿಂದ ಆಗಿರುವ ಪರಿಣಾಮದಿಂದ ರಫ್ತುದಾರರನ್ನು ರಕ್ಷಿಸಲು ಈ ಕ್ರಮಗಳು ನೆರವಾಗಲಿವೆ ಎಂದಿದ್ದಾರೆ.
ರಫ್ತು ಪ್ರಕ್ರಿಯೆಯಲ್ಲಿ ವೈವಿಧ್ಯತೆ ತರುವ ಮತ್ತು ಹೊಸ ಮಾರುಕಟ್ಟೆಗಳ ಅನ್ವೇಷಣೆಯಂತಹ ವಿಷಯಗಳ ಕುರಿತು ಚರ್ಚಿಸಲು ಹಣಕಾಸು ಸಚಿವಾಲಯವು ರಫ್ತುದಾರರೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿದೆ.
ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇ 25ರಷ್ಟು ಹೆಚ್ಚುವರಿ ಸುಂಕ ವಿಧಿಸುವ ಡೊನಾಲ್ಡ್ ಟ್ರಂಪ್ ಆಡಳಿತದ ನಿರ್ಧಾರ ಆಗಸ್ಟ್ 27ರಂದು ಜಾರಿಗೆ ಬಂದಿದೆ. ಅಮೆರಿಕದ ಮಾರುಕಟ್ಟೆ ಪ್ರವೇಶಿಸುವ ಭಾರತದ ಸರಕುಗಳ ಮೇಲಿನ ಒಟ್ಟು ಸುಂಕ ಈಗ ಶೇಕಡ 50ರಷ್ಟಾಗಿದೆ.
ಸಚಿವರ ಭರವಸೆ: ‘ಈ ಸವಾಲಿನ ಸಮಯದಲ್ಲಿ ಸರ್ಕಾರವು ರಫ್ತುದಾರರ ಜತೆ ದೃಢವಾಗಿ ನಿಲ್ಲಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಭರವಸೆ ನೀಡಿದ್ದಾರೆ’ ಎಂದು ಭಾರತೀಯ ರಫ್ತು ಸಂಘಟನೆಗಳ ಒಕ್ಕೂಟ (ಎಫ್‌ಐಇಒ) ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.