ರಾಹುಲ್ ಗಾಂಧಿ
(ಪಿಟಿಐ ಚಿತ್ರ)
ನವದೆಹಲಿ: ಚೀನಾ ಅತಿಕ್ರಮಿಸಿರುವ ಭೂ ಪ್ರದೇಶ ಮರಳಿ ಪಡೆಯಲು ಮತ್ತು ‘ಮಿತ್ರ’ ಅಮೆರಿಕ ವಿಧಿಸಿರುವ ಶೇ 27 ಪ್ರತಿ ಸುಂಕಕ್ಕೆ ಯಾವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದರು.
ಲೋಕಸಭೆಯಲ್ಲಿ ಗುರುವಾರ ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ‘ಭಾರತದ 4,000 ಚದರ ಕಿ.ಮೀ. ಪ್ರದೇಶವನ್ನು ಚೀನಾ ಅತಿಕ್ರಮಿಸಿರುವುದು ಎಲ್ಲರಿಗೂ ತಿಳಿದಿರುವ ಸತ್ಯ. ಹೀಗಿದ್ದರೂ ವಿದೇಶಾಂಗ ಕಾರ್ಯದರ್ಶಿ ಚೀನಾದ ರಾಯಭಾರಿ ಜತೆ ಕೇಕ್ ಕತ್ತರಿಸಿದ್ದಾರೆ. ಗಾಲ್ವನ್ ಕಣಿವೆಯಲ್ಲಿ ನಡೆದ ಸಂಘರ್ಷದ ವೇಳೆ ಭಾರತದ 20 ಯೋಧರು ಹುತಾತ್ಮರಾದರು. ಯೋಧರ ಬಲಿದಾನವನ್ನು ಕೇಂದ್ರ ಸರ್ಕಾರ ಈ ರೀತಿ ಕೇಕ್ ಕತ್ತರಿಸಿ ಸಂಭ್ರಮಿಸಿತೇ, ಇದು ನನಗೆ ನಿಜಕ್ಕೂ ಆಘಾತ ಉಂಟು ಮಾಡಿದೆ. ಕೇಸರಿ ಪಕ್ಷ (ಬಿಜೆಪಿ) ಹಾಗೂ ಆರ್‌ಎಸ್‌ಎಸ್ ಪ್ರತಿ ವಿದೇಶಿಯನ ಎದುರು ತಲೆ ಬಾಗುತ್ತವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ನೆರೆ ರಾಷ್ಟ್ರದೊಂದಿಗೆ ಸಹಜ ಸಂಬಂಧ ಕಾಪಾಡಿಕೊಳ್ಳುವುದನ್ನು ನಾವು ವಿರೋಧಿಸುವುದಿಲ್ಲ. ಆದರೆ, ಅದಕ್ಕೂ ಮೊದಲು ನಾವು ಕಳೆದುಕೊಂಡಿರುವ ಭೂಮಿ ಹಿಂಪಡೆಯಲೇಬೇಕು. ಪ್ರಧಾನಿ ಹಾಗೂ ರಾಷ್ಟ್ರಪತಿಯವರು ಚೀನಾಗೆ ಪತ್ರ ಬರೆದಿರುವುದು ನನ್ನ ಗಮನಕ್ಕೆ ಬಂದಿದೆ. ಇದು ನಮ್ಮವರಿಂದ ತಿಳಿದುಬಂದ ವಿಚಾರವಲ್ಲ. ಬದಲಾಗಿ, ಚೀನಾ ರಾಯಭಾರಿಯೇ ಈ ಬಗ್ಗೆ ಹೇಳುತ್ತಿದ್ದಾರೆ’ ಎಂದು ರಾಹುಲ್ ಹೇಳಿದರು.
‘ನೀವು (ಕೇಂದ್ರ) ಚೀನಾಕ್ಕೆ 4,000 ಕಿ.ಮೀ ಭೂಮಿ ನೀಡಿದ್ದೀರಿ. ಮತ್ತೊಂದೆಡೆ, ನಮ್ಮ ಮಿತ್ರ (ಅಮೆರಿಕ) ಇದ್ದಕ್ಕಿದ್ದಂತೆ ಶೇ 27 ಪ್ರತಿ ಸುಂಕ ವಿಧಿಸಿದೆ. ಇದು ನಮ್ಮ ಆರ್ಥಿಕತೆಯನ್ನು ಸಂಪೂರ್ಣ ಹಾಳುಮಾಡುತ್ತದೆ. ನಮ್ಮ ವಾಹನ ಉದ್ಯಮ, ಔಷಧ ಉದ್ಯಮ ಮತ್ತು ಕೃಷಿ ಎಲ್ಲವೂ ಸಂಕಷ್ಟಕ್ಕೆ ಸಿಲುಕಲಿವೆ. ಪ್ರತಿ ಸುಂಕದ ವಿಚಾರದಲ್ಲಿ ಯಾವ ಕ್ರಮ ತೆಗೆದುಕೊಳ್ಳಲಾಗುವುದೆಂದು ಕೇಂದ್ರ ಸರ್ಕಾರ ಉತ್ತರ ನೀಡಬೇಕು’ ಎಂದು ಅವರು ಒತ್ತಾಯಿಸಿದರು.
ಇದಕ್ಕೂ ಮುನ್ನ ನಡೆದ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ, ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಚೀನಾ ಮಾಡಿರುವ ಅತಿಕ್ರಮಣ ವಿಷಯ ಪ್ರಸ್ತಾಪಿಸಿ, ‘ನಮ್ಮ ಗಡಿಯಲ್ಲಿ ಚೀನಾ ಒಡ್ಡಿರುವ ಗಂಭೀರ ಸವಾಲುಗಳು ಮತ್ತು ಪ್ರಧಾನಿ ನೀಡಿದ ಆಘಾತಕಾರಿ ಕ್ಲೀನ್ ಚಿಟ್’ ಕುರಿತು ಸಂಸತ್‌ನ ಉಭಯ ಸದನದಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ಕೇಳುತ್ತಿದ್ದೇವೆ ಎಂದು ಹೇಳಿದರು.
ಏತನ್ಮಧ್ಯೆ, ಚೀನಾದಿಂದ ಆಮದು ಹೆಚ್ಚುತ್ತಿದ್ದು, ಆರ್ಥಿಕತೆಯಲ್ಲಿ ಪ್ರಮುಖ ಉದ್ಯೋಗ ಸೃಷ್ಟಿಕರ್ತರಾದ ನಮ್ಮ ಎಂಎಸ್ಎಂಇಗಳನ್ನು ನಾಶಪಡಿಸುತ್ತಿವೆ ಎಂದು ಸೋನಿಯಾ ಕಳವಳ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.