ADVERTISEMENT

ತೌತೆ ಚಂಡಮಾರುತ: ಬಾರ್ಜ್ ದುರಂತ, 37 ಮಂದಿಯ ಸುಳಿವಿಲ್ಲ

ತೌತೆ ಚಂಡಮಾರುತದ ಮುನ್ನೆಚ್ಚರಿಕೆಯ ಕಡೆಗಣನೆ l ಸಾವಿನ ಸಂಖ್ಯೆ 49ಕ್ಕೆ ಏರಿಕೆ: ಮುಂಬೈ ಕರಾವಳಿಯಲ್ಲಿ ಮುಂದುವರಿದ ಶೋಧ

ಪಿಟಿಐ
Published 20 ಮೇ 2021, 19:30 IST
Last Updated 20 ಮೇ 2021, 19:30 IST
ಮುಂಬೈ ಕರಾವಳಿಯಲ್ಲಿ ಸಿಲುಕಿದ್ದ ಜಿಎಎಲ್ ಕನ್‌ಸ್ಟ್ರಕ್ಟರ್ ಬಾರ್ಜ್‌ನಲ್ಲಿದ್ದ 137 ಜನರನ್ನು ರಕ್ಷಿಸಿ ತೀರಕ್ಕೆ ಕರೆತರಲಾಯಿತು–ಪಿಟಿಐ ಚಿತ್ರ
ಮುಂಬೈ ಕರಾವಳಿಯಲ್ಲಿ ಸಿಲುಕಿದ್ದ ಜಿಎಎಲ್ ಕನ್‌ಸ್ಟ್ರಕ್ಟರ್ ಬಾರ್ಜ್‌ನಲ್ಲಿದ್ದ 137 ಜನರನ್ನು ರಕ್ಷಿಸಿ ತೀರಕ್ಕೆ ಕರೆತರಲಾಯಿತು–ಪಿಟಿಐ ಚಿತ್ರ   

ನವದೆಹಲಿ: ತೌತೆ ಚಂಡಮಾರುತದ ಪ್ರಭಾವಕ್ಕೆ ಸಿಲುಕಿ ಅರಬ್ಬಿ ಸಮುದ್ರದಲ್ಲಿ ಬಾರ್ಜ್‌ ಮುಳುಗಡೆಯಾಗಿ ಮೃತರಾದವರ ಸಂಖ್ಯೆ 49ಕ್ಕೆ ಏರಿಕೆಯಾಗಿದೆ. ಇನ್ನೂ 37 ಜನರ ಸುಳಿವು ಸಿಕ್ಕಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಚಂಡಮಾರುತ ಅಪ್ಪಳಿಸಿದಾಗ ಪಶ್ಚಿಮ ಕರಾವಳಿಯ 342 ತೈಲ ಮತ್ತು ಅನಿಲ ಘಟಕಗಳಲ್ಲಿ ಕರ್ತವ್ಯದಲ್ಲಿದ್ದ 6,961 ಜನರು ಸುರಕ್ಷಿತವಾಗಿದ್ದಾರೆ. ಆದರೆ 99 ತೇಲುವ ಘಟಕಗಳ ಪೈಕಿ ಐದು ಬಾರ್ಜ್‌ಗಳಲ್ಲಿದ್ದ 714 ಜನರು ಅಪಾಯಕ್ಕೆ ಸಿಲುಕಿದ್ದರು.ಈ ಪೈಕಿ ಕನಿಷ್ಠ 49 ಮಂದಿ ಸಾವನ್ನಪ್ಪಿ, 37 ಮಂದಿ ನಾಪತ್ತೆಯಾಗಿದ್ದಾರೆ.

ಹವಾಮಾನ ಮುನ್ಸೂಚನೆಯ ಆಧಾರದ ಮೇಲೆ ಒಎನ್‌ಜಿಸಿ ತನ್ನ ತುರ್ತು ವ್ಯವಸ್ಥೆ ಸಕ್ರಿಯಗೊಳಿಸಿತ್ತು.ಸುರಕ್ಷಿತ ವಿಧಾನ ಪಾಲಿಸುವುದು ಅಥವಾ ಸುರಕ್ಷಿತ ಸ್ಥಳಗಳಿಗೆ ಹಿಂತಿರುಗುವುದು ಸೇರಿದಂತೆ ಸೂಕ್ತವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಯಾ ಘಟಕಗಳಿಗೆ ಸೂಚನೆ ರವಾನಿಸಿತ್ತು. ಹೀಗಾಗಿ7,675 ಸಿಬ್ಬಂದಿ ಪೈಕಿ6,961 ಜನರು ಸುರಕ್ಷಿತವಾಗಿದ್ದರು.

ADVERTISEMENT

ಆದರೆ 714 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಐದು ಹಡಗುಗಳು ಪ್ರತಿಕೂಲ ಸಂದರ್ಭಗಳನ್ನು ಎದುರಿಸಬೇಕಾಯಿತು.ಖಾಸಗಿ ಗುತ್ತಿಗೆದಾರ ಕಂಪನಿ ಅಫ್ಕಾನ್ಸ್‌ಗಾಗಿ ಕೆಲಸ ಮಾಡುತ್ತಿದ್ದ ಮೂರು ದೋಣಿಗಳು, ಸಾಗರ್ ಭೂಷಣ್ ಹೆಸರಿನ ಒಂದು ಡ್ರಿಲ್‌ಶಿಪ್ ಮತ್ತು ಒಂದು ಬೋಟ್ ಇವುಗಳಲ್ಲಿ ಸೇರಿವೆ.

ಪ್ಲಾಟ್‌ಫಾರ್ಮ್ ಬಳಿ ಇರಲು ಪಿ -305 ಬಾರ್ಜ್ ನಿರ್ಧರಿಸಿತ್ತು. ಆದರೆ ಅದರ ಲಂಗರುಗಳು ಕಿತ್ತುಬಂದವು. ಇದರಲ್ಲಿದ್ದ 261 ಜನರ ಪೈಕಿ 186 ಮಂದಿಯನ್ನು ರಕ್ಷಿಸಲಾಯಿತು. ಉಳಿದ 26 ಜನರಿಗಾಗಿ ಶೋಧ ಮುಂದುವರಿದಿದೆ. ಉಳಿದ ಎರಡು ಬಾರ್ಜ್‌ಗಳಲ್ಲಿದ್ದ 440 ಸಿಬ್ಬಂದಿಯನ್ನು ಸುರಕ್ಷಿತವಾಗಿ ತೀರಕ್ಕೆ ಕರೆತರಲಾಯಿತು.13 ಜನರನ್ನು ಹೊತ್ತೊಯ್ಯುತ್ತಿದ್ದ ಆ್ಯಂಕರ್‌ ನಿರ್ವಹಣೆಯ ಬೋಟ್‌ ವರಪ್ರದಾದಿಂದ ಇಬ್ಬರನ್ನು ರಕ್ಷಿಸಲಾಗಿದೆ. ಉಳಿದ 11 ಮಂದಿಗಾಗಿ ಹುಡುಕಾಟ ನಡೆಯುತ್ತಿದೆ.

ಗುಜರಾತ್‌: ಸಾವಿನ ಸಂಖ್ಯೆ 53ಕ್ಕೆ ಏರಿಕೆ

ತೌತೆ ಚಂಡಮಾರುತದ ಅಬ್ಬರಕ್ಕೆ ಗುರುವಾರದ ಹೊತ್ತಿಗೆ ಗುಜರಾತ್‌ನ ವಿವಿಧ ಭಾಗಗಳಲ್ಲಿ ಸುಮಾರು 53 ಮಂದಿ ಜೀವ ಕಳೆದುಕೊಂಡಿದ್ದಾರೆ.ಗೋಡೆ ಕುಸಿದು ಹೆಚ್ಚಿನ ಸಾವು ನೋವುಗಳು ಸಂಭವಿಸಿವೆ. ಚಂಡಮಾರುತವು ಗುಜರಾತ್‌ ಕರಾವಳಿಯನ್ನು ಸೋಮವಾರ ಪ್ರವೇಶಿಸಿದ ನಂತರದ 28 ತಾಸು ಭಾರಿ ಹಾನಿಗೆ ಕಾರಣವಾಗಿತ್ತು.

ಎಚ್ಚರಿಕೆ ನಿರ್ಲಕ್ಷ್ಯ, ತನಿಖೆಗೆ ಸಮಿತಿ

ತೌತೆ ಚಂಡಮಾರುತದ ಬಗ್ಗೆ ಮೇ 11ರಂದು ನೀಡಲಾಗಿದ್ದ ಎಚ್ಚರಿಕೆಯನ್ನು, ಒಎನ್‌ಜಿಸಿಯ ಹೀರಾ ಪ್ಲಾಟ್‌ಫಾರಂ ಬಳಿಯಲ್ಲಿದ್ದ ಪಪಾ-305 ಬಾರ್ಜ್‌ನ ಕ್ಯಾಪ್ಟನ್ ಕಡೆಗಣಿಸಿದ್ದರು. ಇದರಿಂದಲೇ ಚಂಡಮಾರುತಕ್ಕೆ ಸಿಲುಕಿ, ಬಾರ್ಜ್‌ಗೆ ಹಾನಿಯಾಯಿತು ಎಂದು ತಜ್ಞರು ಹೇಳಿದ್ದಾರೆ.

‘ಮೇ 11ರಂದೇ ಚಂಡಮಾರುತದ ಎಚ್ಚರಿಕೆ ನೀಡಲಾಗಿತ್ತು. ಮೇ 17ರಂದು ಹೀರಾ ಪ್ಲಾಟ್‌ಫಾರಂ ಅನ್ನು ಹಾದುಹೋಗಲಿದೆ ಎಂದು ಎಚ್ಚರಿಕೆಯಲ್ಲಿ ಸೂಚನೆ ನೀಡಲಾಗಿತ್ತು. ಎಚ್ಚರಿಕೆ ನೀಡಿದ ದಿನದಿಂದ, ಚಂಡಮಾರುತ ಹಾದುಹೋಗುವ ದಿನದ ಮಧ್ಯೆ ಆರು ದಿನಗಳ ಸಮಯಾವಕಾಶವಿತ್ತು. ಈ ಅವಧಿಯಲ್ಲಿ ಬಾರ್ಜ್‌ ಅನ್ನು ಅಲ್ಲಿಂದ ತೆರವು ಮಾಡಬಹುದಿತ್ತು. ಅದರ ಸಿಬ್ಬಂದಿಯನ್ನೂ ಅಲ್ಲಿಂದ ತೆರವು ಮಾಡಬಹುದಿತ್ತು. ಆದರೆ ಎಚ್ಚರಿಕೆಯನ್ನು ಕಡೆಗಣಿಸಲಾಗಿತ್ತು’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಹವಾಮಾನ ಇಲಾಖೆ ನೀಡಿದ್ದ ಎಚ್ಚರಿಕೆಯನ್ನು ಮಹಾರಾಷ್ಟ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿತ್ತು. ಹೀಗಾಗಿ ಕರಾವಳಿ ಪ್ರದೇಶದಿಂದ 13,000ಕ್ಕೂ ಹೆಚ್ಚು ಜನರನ್ನು ತೆರವು ಮಾಡಿತ್ತು. ಆದರೆ ಪಪಾ-305 ಕ್ಯಾಪ್ಟನ್ ಆ ಎಚ್ಚರಿಕೆಯನ್ನು ಕಡೆಗಣಿಸಿದ್ದರು’ ಎಂದು ತಜ್ಞರು ಹೇಳಿದ್ದಾರೆ.

‘ಒಂದು ವಾರ ಮೊದಲೇ ಎಚ್ಚರಿಕೆ ದೊರೆತಿತ್ತು. ಈ ಪ್ರದೇಶದಲ್ಲಿ ಇದ್ದ ಹಲವು ಹಡಗುಗಳು ಇಲ್ಲಿಂದ ತೆರಳಿದ್ದವು. ನಮ್ಮ ಬಾರ್ಜ್‌ನ ಕ್ಯಾಪ್ಟನ್‌ಗೂ ಇದನ್ನೇ ನಾವು ಹೇಳಿದ್ದೆವು. ಚಂಡಮಾರುತದ ವೇಳೆ ಪ್ರತಿಗಂಟೆಗೆ 40 ಕಿ.ಮೀ.ಗಿಂತಲೂ ಹೆಚ್ಚಿನ ವೇಗದಲ್ಲಿ ಗಾಳಿ ಬೀಸುವುದಿಲ್ಲ ಎಂದು ಅವರು ಕಡೆಗಣಿಸಿದರು. ಆದರೆ, ಚಂಡಮಾರುತ ಬಂದಾಗ ಪ್ರತಿಗಂಟೆಗೆ 100 ಕಿ.ಮೀ.ಗಿಂತಲೂ ಹೆಚ್ಚು ವೇಗದಲ್ಲಿ ಗಾಳಿ ಬೀಸುತ್ತಿತ್ತು. ನಮ್ಮ ಬಾರ್ಜ್‌ನ 5 ಲಂಗರುಗಳು ತುಂಡಾದವು’ ಎಂದು ಬಾರ್ಜ್‌ನ ಮುಖ್ಯ ಎಂಜಿನಿಯರ್‌ ರೆಹಮಾನ್ ಶೇಕ್‌ ಹೇಳಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿದ್ದವು.

ಈ ಅವಘಡದ ಬಗ್ಗೆ ತನಿಖೆ ನಡೆಸಲು ಉನ್ನತಮಟ್ಟದ ಸಮಿತಿ ರಚಿಸಲಾಗುವುದು ಎಂದು ಇಂಧನ ಸಚಿವಾಲಯ ಹೇಳಿದೆ.

ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಒತ್ತಾಯ

ಬಾರ್ಜ್‌ ದುರಂತದ ಹೊಣೆ ಹೊತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ರಾಜೀನಾಮೆ ನೀಡಬೇಕು. ಸರ್ಕಾರಿ ಸ್ವಾಮ್ಯದ ತೈಲ ಶೋಧ ಕಂಪನಿ ಒಎನ್‌ಜಿಸಿಯ ಮುಖ್ಯಸ್ಥರ ಮೇಲೆಯೂ ಕ್ರಮ ಕೈಗೊಳ್ಳಬೇಕು ಎಂದು ಮಹಾರಾಷ್ಟ್ರದ ಆಡಳಿತಾರೂಢ ಮಹಾ ವಿಕಾಸ ಅಘಾಡಿ (ಎಂಎವಿ) ಒತ್ತಾಯಿಸಿದೆ.

ಹವಾಮಾನ ಇಲಾಖೆ ನೀಡಿದ್ದ ಮುನ್ನೆಚ್ಚರಿಕೆಯನ್ನು ಒಎನ್‌ಜಿಸಿ ನಿರ್ಲಕ್ಷಿಸಿದೆ ಎಂದು ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಮುಖಂಡರು ಹೇಳಿದ್ದಾರೆ.

‘ಮಹಾರಾಷ್ಟ್ರದಲ್ಲಿ ಇಂತಹ ದುರಂತ ನಡೆದಿದ್ದರೆ ರಾಜೀನಾಮೆ ನೀಡುವಂತೆ ಬಿಜೆಪಿ ಆಗ್ರಹಿಸುತ್ತಿತ್ತು. ಧರ್ಮೇಂದ್ರ ಪ್ರಧಾನ್‌ ನೇತೃತ್ವದ ಪೆಟ್ರೋಲಿಯಂ ಸಚಿವಾಲಯದ ಅಧೀನದಲ್ಲಿ ಒಎನ್‌ಜಿಸಿ ಇದೆ. ಹಾಗಾಗಿ, ಅವರ ರಾಜೀನಾಮೆಯನ್ನು ಬಿಜೆಪಿ ಏಕೆ ಕೇಳಬಾರದು? ಭಾರಿ ಸಂಖ್ಯೆಯಲ್ಲಿ ಜನರ ಪ್ರಾಣ ಹಾನಿಗೆ ಯಾರು ಹೊಣೆ? ಪರಿಹಾರ ಮತ್ತು ಇತರ ನೆರವನ್ನು ನೀಡಿ, ಪರಸ್ಪರ ದೋಷಾರೋಪಣೆಯಿಂದ ಪ್ರಯೋಜನ ಇಲ್ಲ’ ಎಂದು ಶಿವಸೇನಾ ವಕ್ತಾರ ಅರವಿಂದ ಸಾವಂತ್‌ ಹೇಳಿದ್ದಾರೆ.

‘ಇದು ಮಾನವ ನಿರ್ಮಿತ ದುರಂತ ಎಂಬುದು ಅತ್ಯಂತ ಸ್ಪಷ್ಟ. ಧರ್ಮೇಂದ್ರ ಪ್ರಧಾನ್‌ ಅವರೇ ಇದರ ಹೊಣೆ ಹೊರಬೇಕು. ಕಾರ್ಮಿಕರ ಜೀವವನ್ನು ಅಪಾಯಕ್ಕೆ ಒಡ್ಡಿರುವುದರ ಹೊಣೆ ಇರುವ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದು ಮಹಾರಾಷ್ಟ್ರ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಸಚಿನ್‌ ಸಾವಂತ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.