ADVERTISEMENT

ಈ ಎಐ ಬಳಸಿ ನೀವೇ ಸೀರೆ, ಬಟ್ಟೆಗಳನ್ನು ನಿಮಗೆ ಬೇಕಾದ ರೀತಿ ವಿನ್ಯಾಸ ಮಾಡಬಹುದು!

ಅಜಿತ್ ಅತ್ರಾಡಿ
Published 22 ಫೆಬ್ರುವರಿ 2026, 3:47 IST
Last Updated 22 ಫೆಬ್ರುವರಿ 2026, 3:47 IST
   

ನವದೆಹಲಿ: ನಿಮ್ಮ ಸೀರೆ ಅಥವಾ ಯಾವುದೇ ಬಟ್ಟೆಯನ್ನು ನೀವೇ ತ್ವರಿತವಾಗಿ ಮತ್ತು ಪರಿಪೂರ್ಣ ಬಣ್ಣ ಸಂಯೋಜನೆಗಳೊಂದಿಗೆ ವಿನ್ಯಾಸಗೊಳಿಸಲು ಬಯಸುವಿರಾ? ಹಾಗಿದ್ದರೆ, ನಿಮಗಾಗಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ಒಂದು ಎಐ ಹೊರತಂದಿದೆ.

ಭಾರತೀಯ ಮೂಲದ ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿಯಾದ ಟಿಸಿಎಸ್, ಒಂದು ವಿಶಿಷ್ಟ ಕೃತಕ ಬುದ್ಧಿಮತ್ತೆ (ಎಐ) ವೇದಿಕೆಯನ್ನು ಅಭಿವೃದ್ಧಿಪಡಿಸಿದ್ದು, ಇದು ಗ್ರಾಹಕರು ತಮ್ಮ ಸೀರೆ ಅಥವಾ ಯಾವುದೇ ಬಟ್ಟೆಯನ್ನು ಮೂರು ಆಯಾಮದ ಮಾದರಿಯಲ್ಲಿ ವಿನ್ಯಾಸಗೊಳಿಸಲು ಅವಕಾಶ ನೀಡುತ್ತದೆ ಎಂದು ಸಂಸ್ಥೆ ಹೇಳಿದೆ. ಬಹುಮುಖ್ಯವಾಗಿ ಬಟ್ಟೆಯನ್ನು ಹೆಚ್ಚು ನಿಖರ ಮತ್ತು ತ್ವರಿತವಾಗಿ ಉತ್ಪಾದಿಸುವಲ್ಲಿ ನೇಕಾರರಿಗೆ ಸಹಾಯ ಮಾಡುತ್ತದೆ ಎಂದು ವರದಿಯಾಗಿದೆ.

ಇತ್ತೀಚೆಗೆ ಮುಕ್ತಾಯಗೊಂಡ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಟಿಸಿಎಸ್‌, ‘ಇಂಟೆಲಿಜೆಂಟ್ ಡಿಸೈನ್ ಪ್ಲಾಟ್‌ಫಾರ್ಮ್’ಎಂದು ಕರೆಯಲ್ಪಡುವ ಎಐ ಅನ್ನು ಪ್ರದರ್ಶಿಸಿದೆ.

ADVERTISEMENT

"ಗ್ರಾಹಕರು ಸಾಂಪ್ರದಾಯಿಕ ಕಾಂಜೀವರಂ ಶೈಲಿಯ ಜೊತೆಗೆ ಆಧುನಿಕ ಶೈಲಿಯ ಮಿಶ್ರಣದ ಮಾದರಿಯ ಸೀರೆಗಳ ವಿನ್ಯಾಸಕ್ಕೆ ಇದರಲ್ಲಿ ವಿನಂತಿಸಬಹುದು. ಎಐ ಅದನ್ನು ತಕ್ಷಣವೇ ರಚಿಸುತ್ತದೆ, ನೇಕಾರರು ಸಂಕೀರ್ಣ ವಿನ್ಯಾಸಗಳಿಗಾಗಿ ಸಾಕಷ್ಟು ಶ್ರಮ ಪಡುವ ಬದಲು ಕರಕುಶಲತೆಯ ಮೇಲೆ ಗಮನ ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ’ಎಂದು ಟಾಟಾ ಎಕ್ಸ್‌ಪೋ ಬೂತ್‌ನ ಕಾರ್ಯನಿರ್ವಾಹಕರೊಬ್ಬರು ತಿಳಿಸಿದ್ದಾರೆ.

ಯಾವುದೇ ಒಂದು ಸೀರೆ ಅಥವಾ ಬಟ್ಟೆಯ ವಿನ್ಯಾಸದ ಆಯ್ಕೆ, ಬಣ್ಣ ಸಂಯೋಜನೆಗೆ ಬೇಕಾದ ದಿನಗಳು ಅಥವಾ ವಾರಗಳ ಸಮಯವನ್ನು ಇದು ತಗ್ಗಿಸುತ್ತದೆ. ಕೇವಲ ಕೆಲವೇ ನಿಮಿಷಗಳಲ್ಲಿ ಪರಿಹಾರ ನೀಡುತ್ತದೆ ಎಂದು ವರದಿಯಾಗಿದೆ. ಅಲ್ಲದೆ, ಇದು ಕೈಮಗ್ಗ ವಲಯದ ತ್ಯಾಜ್ಯವನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಿನ್ಯಾಸದ ದೋಷ ಮತ್ತು ಉತ್ಪಾದನೆ ದೋಷಗಳಂತಹ ಸಮಸ್ಯೆಗಳಿಂದ ಸೀರೆ ಅಥವಾ ಉಡುಪುಗಳು ಹಿಂದಿರುಗಿಸುವ ಸಮಸ್ಯೆಯಿಂದ ಪರಿಹಾರ ಒದಗಿಸುತ್ತದೆ ಎಂದೂ ಅವರು ತಿಳಿಸಿದ್ದಾರೆ.

ಸ್ಮಾರ್ಟ್ ವೀವರ್ ಅಸಿಸ್ಟ್ ಅನ್ನು ಸಹ ಟಿಸಿಎಸ್ ಪ್ರದರ್ಶಿಸಿದ್ದು,ಇದು ನೇಕಾರರಿಗೆ ದಾರದ ಚಲನೆಯಲ್ಲಿ ನೈಜ ಸಮಯದಲ್ಲಿ ಮಾರ್ಗದರ್ಶನ ಮಾಡುವ ಎಲ್ಇಡಿ ಆಧಾರಿತ ವ್ಯವಸ್ಥೆಯಾಗಿದೆ.

ಇದು ಸೀರೆ ಅಥವಾ ಬಟ್ಟೆಗಳನ್ನು ವೇಗವಾಗಿ ನೇಯಲು ಅನುವು ಮಾಡಿಕೊಡುತ್ತದೆ. ಕಡಿಮೆ ಅನುಭವವಿರುವ ನೇಕಾರರು ದೀರ್ಘ ಅನುಕ್ರಮಗಳನ್ನು ನೆನಪಿಟ್ಟುಕೊಳ್ಳುವ ಅಗತ್ಯವಿಲ್ಲದೆ ಸಂಕೀರ್ಣ ಮಾದರಿಗಳನ್ನು ಅನುಸರಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಲಾಗುತ್ತದೆ.

‘ಟಿಸಿಎಸ್ ತಂಡವು ಈ ಸಾಫ್ಟ್‌ವೇರ್ ಅನ್ನು ತಮಿಳುನಾಡಿನ ಕಾಂಚೀಪುರಂನಲ್ಲಿರುವ ಕಾಂಜೀವರಂ ಸೀರೆಗಳ ಕ್ಲಸ್ಟರ್‌ನಲ್ಲಿ ಯಶಸ್ವಿಯಾಗಿ ಪ್ರಯೋಗ ನಡೆಸಿದೆ’ಎಂದು ಕಾರ್ಯನಿರ್ವಾಹಕರು ಹೇಳಿದ್ದಾರೆ.

ಈ ತಂತ್ರಜ್ಞಾನವನ್ನು ಇನ್ನೂ ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗಿಲ್ಲವಾದರೂ, ಕಂಪನಿಯು ನೇಕಾರರು ಮತ್ತು ಗ್ರಾಹಕರಿಗೆ ಅದರ ಪ್ರಯೋಜನಗಳನ್ನು ವರ್ಗಾಯಿಸಲು ಭಾರತೀಯ ಕೈಮಗ್ಗ ನಿಗಮ ಮತ್ತು ಕೇಂದ್ರ ಜವಳಿ ಸಚಿವಾಲಯದೊಂದಿಗೆ ಚರ್ಚೆಯಲ್ಲಿ ತೊಡಗಿದೆ ಎಂದು ವರದಿಯಾಗಿದೆ.

ಇದು ಹೇಗೆ ಕೆಲಸ ಮಾಡುತ್ತದೆ

ಈ ಎಐ ತಂತ್ರಜ್ಞಾನದ ಮೂಲಕ, ಕಾಂಜೀವರಂ ಸೀರೆಗಳ ವಿನ್ಯಾಸಗಳನ್ನು ಹಸ್ತಚಾಲಿತವಾಗಿ ಅಲ್ಲದೆ ಎಐ ಬಳಸಿ ಮಾಡಬಹುದಾಗಿದೆ.

ಈ ಎಐ ಧ್ವನಿಯ ಕಮಾಂಡ್, ರೇಖಾಚಿತ್ರಗಳು ಅಥವಾ ಉಲ್ಲೇಖಗಳನ್ನು ಸ್ವೀಕರಿಸುತ್ತದೆ. ಅವುಗಳನ್ನು ಮಗ್ಗಕ್ಕೆ ಸಿದ್ಧ ವಿನ್ಯಾಸಗಳಾಗಿ ಪರಿವರ್ತಿಸುತ್ತದೆ. ವಿನ್ಯಾಸವನ್ನು ಅಂತಿಮಗೊಳಿಸಿದ ನಂತರ, ಗ್ರಾಹಕರು ನೇಯ್ಗೆ ಪ್ರಾರಂಭವಾಗುವ ಮೊದಲೇ ಸೀರೆ ಅಥವಾ ಬಟ್ಟೆಯು ಹೇಗೆ ಕಾಣುತ್ತದೆ ಎಂಬುದನ್ನು ನೋಡಲು 3ಡಿ ಅಥವಾ ವರ್ಧಿತ ರಿಯಾಲಿಟಿಯಲ್ಲಿ ಔಟ್‌ಪುಟ್ ಅನ್ನು ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.