ಅಹಮದಾಬಾದ್: ಏರ್ ಇಂಡಿಯಾ ವಿಮಾನ ಪತನದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ವಿವಿಧ ಊಹಾಪೋಹಗಳಿಗೆ ಕಾರಣವಾಗಿದ್ದ ಬೆನ್ನಲ್ಲೇ ಆ ವಿಡಿಯೊ ಚಿತ್ರೀಕರಿಸಿದ್ದ 17 ವರ್ಷದ ಯುವಕ ಆರ್ಯನ್, ಅಹಮದಾಬಾದ್ ಪೊಲೀಸರ ಮುಂದೆ ಸಾಕ್ಷಿದಾರನಾಗಿ ಹೇಳಿಕೆ ದಾಖಲಿಸಿದ್ದಾನೆ. ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ವಿಮಾನ ಹಾರುತ್ತಿರುವುದನ್ನು ಮನೆಯ ಮಹಡಿಯಲ್ಲಿ ನಿಂತು ಆರ್ಯನ್ ಚಿತ್ರೀಕರಿಸುತ್ತಿದ್ದ ವೇಳೆಯಲ್ಲೇ ವಿಮಾನ ಪತನಗೊಂಡಿದೆ. ಈ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ವಿವಿಧ ಊಹಾಪೋಹಗಳು ಸೃಷ್ಟಿಯಾಗಿದ್ದವು. ಅಲ್ಲದೇ, ಪೊಲೀಸರು ಆರ್ಯನ್‌ನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ ಎಂದೂ ಹೇಳಲಾಗಿತ್ತು.
ಈ ಹಿನ್ನೆಲೆಯಲ್ಲಿ ಪೊಲೀಸರು ಮಾಹಿತಿ ನೀಡಿ, ’ಯಾರನ್ನೂ ಬಂಧಿಸಲಾಗಿಲ್ಲ. ಯುವಕ ಆರ್ಯನ್ ತನ್ನ ತಂದೆಯ ಜತೆಗೆ ಬಂದು ಸಾಕ್ಷಿದಾರನಾಗಿ ಹೇಳಿಕೆ ನೀಡಿದ್ದಾನೆ.‘ ಎಂದಿದ್ದಾರೆ. ಮಾಧ್ಯಮಗಳೊಂದಿಗೆ ಆರ್ಯನ್ ಕೂಡ ಮಾತನಾಡಿ, ‘ನಾನು ವಿಡಿಯೊ ಚಿತ್ರೀಕರಿಸಲು ಆರಂಭಿಸಿದ 24 ಸೆಕೆಂಡ್‌ಗಳಲ್ಲೇ ವಿಮಾನ ಪತನಗೊಂಡಿತು. ಅದು ಅಪಘಾತಕ್ಕೀಡಾಗುತ್ತದೆ ಎಂಬ ಊಹೆಯೂ ನನಗೆ ಇರಲಿಲ್ಲ. ಆ ದೃಶ್ಯ ನೋಡಿ ನಾನೇ ಆಘಾತಕ್ಕೀಡಾದೆ’ ಎಂದಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.