ADVERTISEMENT

ಚುನಾವಣಾ ಅಧಿಕಾರಿಗಳು ತಮ್ಮ ತಪ್ಪಿಗೆ ನನ್ನನ್ನು ದೂಷಿಸುತ್ತಿದ್ದಾರೆ: ತೇಜಸ್ವಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 14:05 IST
Last Updated 7 ಆಗಸ್ಟ್ 2025, 14:05 IST
<div class="paragraphs"><p>ತೇಜಸ್ವಿ ಯಾದವ್</p></div>

ತೇಜಸ್ವಿ ಯಾದವ್

   

ಪಟ್ನಾ: ‘ನನಗೆ ಎರಡು ಮತದಾರರ ಗುರುತಿನ ಪತ್ರಗಳನ್ನು (ಎಪಿಕ್) ನೀಡಿರುವುದು ಚುನಾವಣಾ ಅಧಿಕಾರಿಗಳ ತಪ್ಪು. ಆದರೆ, ಅವರು ತಮ್ಮ ತಪ್ಪನ್ನು ಮರೆಮಾಚುವ ಸಲುವಾಗಿ ನನಗೆ ನೋಟಿಸ್ ಕಳುಹಿಸಿ ಸುಖಾಸುಮ್ಮನೆ ದೂಷಿಸುತ್ತಿದ್ದಾರೆ’ ಎಂದು ಆರ್‌ಜೆಡಿ ನಾಯಕ ಹಾಗೂ ಬಿಹಾರ ವಿಧಾನಸಭಾ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ವಾಗ್ದಾಳಿ ನಡೆಸಿದ್ದಾರೆ.

ಚುನಾವಣಾ ಆಯೋಗ ನೋಟಿಸ್‌ ನೀಡಿರುವ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನಗೆ ಪಟ್ನಾ ಜಿಲ್ಲಾಡಳಿತದಿಂದ ನೋಟಿಸ್ ಬಂದಿದೆ ಹೊರತು ಚುನಾವಣಾ ಆಯೋಗದಿಂದಲ್ಲ. ನೋಟಿಸ್‌ಗೆ ತಕ್ಕ ಉತ್ತರ ನೀಡುತ್ತೇನೆ. ಚುನಾವಣಾ ಅಧಿಕಾರಿಗಳು ತಮ್ಮ ತಪ್ಪಿಗೆ ನನ್ನನ್ನು ದೂಷಿಸಲು ಪ್ರಯತ್ನಿಸುತ್ತಿದ್ದಾರೆ. ನಾನು ಒಂದೇ ಕ್ಷೇತ್ರದಿಂದ ಮತ ಚಲಾಯಿಸುತ್ತಿದ್ದೇನೆ. ನನ್ನ ಹೆಸರಿನಲ್ಲಿ ಎರಡು ಎಪಿಕ್ ಸಂಖ್ಯೆಗಳನ್ನು ನೀಡಿದ್ದರೆ ಅದು ಯಾರ ತಪ್ಪು’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಆಗಸ್ಟ್ 3ರಂದು ಎರಡು ಎಪಿಕ್ ಕಾರ್ಡ್‌ಗಳನ್ನು ಹೊಂದಿರುವುದಕ್ಕಾಗಿ ತೇಜಸ್ವಿ ಯಾದವ್ ಅವರಿಗೆ ಚುನಾವಣಾ ಆಯೋಗ ನೋಟಿಸ್‌ ನೀಡಿತ್ತು.

‘ಎರಡು ಎಪಿಕ್‌ ಕಾರ್ಡ್‌ ಹೊಂದುವುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಇದು ಅಪರಾಧ’ ಎಂದು ಬಿಜೆಪಿ ಖಂಡಿಸಿತ್ತು. ಇದರ ಬೆನ್ನಲ್ಲೇ, ಚುನಾವಣಾ ಆಯೋಗವು ನೋಟಿಸ್‌ ಜಾರಿ ಮಾಡಿತ್ತು. ತೇಜಸ್ವಿ ಅವರು ದಿಘಾ ವಿಧಾನಸಭಾ ಕ್ಷೇತ್ರದಲ್ಲಿ ಮತ ಚಲಾಯಿಸುತ್ತಾರೆ.

‘ಆಗಸ್ಟ್‌ 2ರಂದು ಸುದ್ದಿಗೋಷ್ಠಿ ನಡೆಸಿದ್ದ ನೀವು, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲ ಎಂದು ಹೇಳಿದ್ದಿರಿ. ಎಪಿಕ್‌ ಸಂಖ್ಯೆಯನ್ನೂ (ಆರ್‌ಎಬಿ2916120) ಉಲ್ಲೇಖಿಸಿದ್ದಿರಿ. ತನಿಖೆ ನಂತರ, ಈ ಸಂಖ್ಯೆಯ ಎಪಿಕ್‌ ಅನ್ನು ಆಯೋಗ ನೀಡಿಯೇ ಇಲ್ಲ ಎಂಬುದು ತಿಳಿದುಬಂದಿತು’ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

‘ಮತ್ತೊಂದೆಡೆ, ನಿಮ್ಮ ಹೆಸರು ಮತಗಟ್ಟೆ ಸಂಖ್ಯೆ 204ರ (ಬಿಹಾರ ಪಶುವಿಜ್ಞಾನ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿದೆ) ಮತದಾರರ ಪಟ್ಟಿಯಲ್ಲಿ ಇದ್ದು ‘ಆರ್‌ಎಬಿ456228’ ಸಂಖ್ಯೆ ಹೊಂದಿದೆ ಎಂಬುದು ಕೂಡ ತನಿಖೆಯಿಂದ ತಿಳಿದುಬಂದಿದೆ’ ಎಂದು ವಿವರಿಸಲಾಗಿದೆ.

‘ಮತ್ತೊಂದು ಎಪಿಕ್‌ ಅನ್ನು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಹಸ್ತಾಂತರಿಸಬೇಕು’ ಎಂದು ಆಯೋಗ ಸೂಚನೆ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.