ಪಟ್ನಾ: 'ನಾನು ಜೀವಂತವಾಗಿರುವವರೆಗೂ ಬಿಜೆಪಿ ವಿರುದ್ಧ ಹೋರಾಡುತ್ತಲೇ ಇರುತ್ತೇನೆ ಎಂದು ಹೇಳಿರುವ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ನಿಜವಾದ ಬಿಹಾರಿ ಎಂದಿಗೂ ಹೊರಗಿನವರಿಗೆ ಹೆದರುವುದಿಲ್ಲ' ಎಂದು ಅಮಿತ್ ಶಾ ವಿರುದ್ಧ ಕಿಡಿಕಾರಿದ್ದಾರೆ.
ಐಆರ್‌ಸಿಟಿಸಿಯಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ಆರ್‌ಜೆಡಿ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್, ಬಿಹಾರ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಹಾಗೂ ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ವಿರುದ್ಧ ದೆಹಲಿ ನ್ಯಾಯಾಲಯವೊಂದು ಸೋಮವಾರ ದೋಷಾರೋಪ ನಿಗದಿ ಮಾಡಿದೆ.
ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಯಾದವ್, ಒಂದು ತಿಂಗಳ ಹಿಂದೆ ಬಿಹಾರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನಮ್ಮನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು. ನಾವು ನಿಜವಾದ ಬಿಹಾರಿಗಳು..ನಾವು ಹೊರಗಿನವರಿಗೆ ಹೆದರುವುದಿಲ್ಲ. ನಾನು ಬಿಜೆಪಿ ವಿರುದ್ಧ ಹೋರಾಡುತ್ತೇನೆ ಮತ್ತು ಗೆಲ್ಲುತ್ತೇನೆ ಎಂದಿದ್ದಾರೆ.
ನ್ಯಾಯಾಲಯವು ರಾಬ್ಡಿ ದೇವಿ ಹಾಗೂ ತೇಜಸ್ವಿ ವಿರುದ್ಧ ಕ್ರಿಮಿನಲ್ ಸಂಚು ಹಾಗೂ ಮೋಸದ ಆರೋಪ ಹೊರಿಸಿದೆ. ಐಆರ್‌ಸಿಟಿಸಿಯ ಎರಡು ಹೋಟೆಲ್‌ಗಳ ನಿರ್ವಹಣೆಯನ್ನು ಖಾಸಗಿ ಕಂಪನಿಗೆ ವಹಿಸುವ ಗುತ್ತಿಗೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಪ್ರತಿಕ್ರಿಯಿಸಿರುವ ಆರ್‌ಜೆಡಿ ರಾಜ್ಯಸಭಾ ಸಂಸದ ಮನೋಜ್ ಕುಮಾರ್ ಝಾ, ರಾಜಕೀಯ ಪೈಪೋಟಿಯಿಂದ ಕಾನೂನಿನ ನಿಯಮವನ್ನು ದುರ್ಬಲಗೊಳಿಸಲಾಗುತ್ತಿದೆ. ಇದರಿಂದ ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕುಗ್ಗಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.