ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್
ಕೃಪೆ: ಪಿಟಿಐ
ಸಸಾರಮ್ (ಬಿಹಾರ): ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಿಹಾರದ ಜನರಿಗೆ ಮೋಸ ಮಾಡಲು ಬಿಡುವುದಿಲ್ಲ ಎಂದು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಭಾನುವಾರ ಹೇಳಿದ್ದಾರೆ.
ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಕಾಂಗ್ರೆಸ್ ಪಕ್ಷ 'ಮತದಾರನ ಅಧಿಕಾರ ಯಾತ್ರೆ'ಗೆ ಚಾಲನೆ ನೀಡಿದ ಬಳಿಕ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ತೇಜಸ್ವಿ ಮಾತನಾಡಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜನರ ಮತದಾನದ ಹಕ್ಕನ್ನು ಚುನಾವಣಾ ಆಯೋಗದ ಮೂಲಕ ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಎಸ್‌ಐಆರ್ ಅನ್ನು 'ಮತ ಡಕಾಯಿತಿ' ಎಂದು ಕರೆದಿರುವ ಅವರು, 'ಎಂಥದೇ ಪರಿಸ್ಥಿತಿ ಎದುರಾದರೂ ರಾಜ್ಯದಲ್ಲಿ ಮತಗಳ್ಳತನವಾಗಲು ಬಿಡುವುದಿಲ್ಲ' ಎಂದು ಸವಾಲು ಹಾಕಿದ್ದಾರೆ.
'ಬಿ.ಆರ್. ಅಂಬೇಡ್ಕರ್ ಅವರು ನಮಗೆ ಮತದಾನದ ಹಕ್ಕನ್ನು ನೀಡಿದ್ದಾರೆ. ಆದರೆ, ಬಿಜೆಪಿಯವರು ಆ ಹಕ್ಕನ್ನು ಚುನಾವಣಾ ಆಯೋಗದ ಮೂಲಕ ಕಸಿದುಕೊಳ್ಳಲು ಪ್ರತ್ನಿಸುತ್ತಿದ್ದಾರೆ. ಆಯೋಗವು ಬಿಜೆಪಿಯ ನಿರ್ದೇಶನಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತಿದೆ' ಎಂದು ದೂರಿದ್ದಾರೆ.
'ಎಸ್‌ಐಆರ್ ಎಂಬುದು ಬಿಹಾರದಲ್ಲಿ ಜನರ ಮತದಾನದ ಹಕ್ಕನ್ನು ರದ್ದು ಮಾಡುವುದಕ್ಕಾಗಿ ನಡೆಸುತ್ತಿರುವ ಪಿತೂರಿಯಾಗಿದೆ. ಮೋದಿ ಅವರು ರಾಜ್ಯದ ಜನರನ್ನು ವಂಚಿಸಲು ಬಿಡುವುದಿಲ್ಲ' ಎಂದು ಪುನರುಚ್ಚರಿಸಿದ್ದಾರೆ.
'ಮತದಾರ ಅಧಿಕಾರ ಯಾತ್ರೆ'ಯು ಸುಮಾರು 1,300 ಕಿ.ಮೀ. ಸಾಗಲಿದ್ದು, ರಾಜ್ಯದ 20 ಜಿಲ್ಲೆಗಳನ್ನು ಹಾದುಹೋಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.