ADVERTISEMENT

ಬಿಹಾರ | ಮತದಾರರ ಕರಡು ಪಟ್ಟಿಯಲ್ಲಿ ನನ್ನ ಹೆಸರಿಲ್ಲ: ತೇಜಸ್ವಿ ಯಾದವ್

ಪಿಟಿಐ
Published 2 ಆಗಸ್ಟ್ 2025, 13:54 IST
Last Updated 2 ಆಗಸ್ಟ್ 2025, 13:54 IST
   

ಪಟ್ನಾ(ಬಿಹಾರ): ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ನಡೆಸಿ, ಚುನಾವಣಾ ಆಯೋಗವು ಪ್ರಕಟಿಸಿರುವ ಮತದಾರರ ಕರಡು ಪಟ್ಟಿಯಲ್ಲಿ ತನ್ನ ಹೆಸರು ಕಾಣೆಯಾಗಿದೆ ಎಂದು ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್‌ ಶನಿವಾರ ಆರೋಪಿಸಿದ್ದಾರೆ. 

ಯಾದವ್ ಅವರ ಈ ಆರೋಪವನ್ನು ಬಿಜೆಪಿ ನಾಯಕ, ಉಪ ಮುಖ್ಯಮಂತ್ರಿ ಸಾಮ್ರಾಟ್‌ ಚೌಧರಿ ತಿರಸ್ಕರಿಸಿದ್ದು, ಕರಡು ಪಟ್ಟಿಯಲ್ಲಿ ಯಾದವ್ ವಿವರ ಹಾಗೂ ಫೋಟೊ ಇರುವ ಸ್ಕ್ರೀನ್‌ಶಾಟ್‌ ಹಂಚಿಕೊಂಡಿದ್ದಾರೆ. 

ಪತ್ರಿಕಾಗೋಷ್ಠಿಯೊಂದರಲ್ಲಿ ಆಯೋಗದ ವೆಬ್‌ಸೈಟ್‌ನಲ್ಲಿ ಇಪಿಐಸಿ ನಂಬರ್‌ ನಮೂದಿಸಿ ಯಾದವ್‌ ತಮ್ಮ ವಿವರಗಳನ್ನು ಪರಿಶೀಲಿಸಲು ಮುಂದಾಗಿದ್ದರು. ಆದರೆ, ವೆಬ್‌ಸೈಟ್‌ನಲ್ಲಿ ಯಾವುದೇ ವಿವರ ಲಭ್ಯವಾಗಿಲ್ಲ.

ADVERTISEMENT

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ‘ನೋಡಿ ನನ್ನ ಹೆಸರು, ವಿವರವೇ ಸಿಗುತ್ತಿಲ್ಲ. ನಾನು ಚುನಾವಣೆಯಲ್ಲಿ ಹೇಗೆ ಸ್ಪರ್ಧಿಸಲಿ’ ಎಂದಿದ್ದರು. 

ಇದಕ್ಕೆ ‘ಎಕ್ಸ್‌’ನಲ್ಲಿ ಚೌಧರಿ ತಿರುಗೇಟು ನೀಡಿದ್ದು, ‘ನಿಮಗೆ ಹೇಗೆ ವಿವರ ಹುಡುಕಬೇಕು ಎಂಬ ಜ್ಞಾನದ ಕೊರತೆ ಇದೆ’ ಎಂದು ಲೇವಡಿ ಮಾಡಿದ್ದಾರೆ. 

ತೇಜಸ್ವಿ ಹೆಸರು ಇದೆ: ಚುನಾವಣಾ ಆಯೋಗ

ಮತದಾರರ ಕರಡು ಪಟ್ಟಿಯಲ್ಲಿ ತನ್ನ ಹೆಸರು ಕಾಣೆಯಾಗಿದೆ ಎಂದು ತೇಜಸ್ವಿ ಯಾದವ್‌ ಆರೋಪಿಸಿರುವಂತೆಯೇ ಇದಕ್ಕೆ ಚುನಾವಣಾ ಆಯೋಗವು (ಇ.ಸಿ) ಪ್ರತಿಕ್ರಿಯೆ ನೀಡಿದೆ.

‘ಬಿಹಾರದ ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯದ ಲೈಬ್ರರಿ ಕಟ್ಟಡದ ಮತದಾನ ಕೇಂದ್ರ 204ರಲ್ಲಿ ಸರಣಿ ಸಂಖ್ಯೆ 416ರಲ್ಲಿ ಪ್ರಸಕ್ತ ತೇಜಸ್ವಿ ಯಾದವ್‌ ಅವರ ಹೆಸರಿದೆ. ಈ ಹಿಂದೆ ಮತದಾನ ಕೇಂದ್ರ 171ರ  ಸರಣಿ ಸಂಖ್ಯೆ 481ರಲ್ಲಿ ಅವರ ಹೆಸರು ಇತ್ತು’ ಎಂದು ಚುನಾವಣಾ ಆಯೋಗ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.