ADVERTISEMENT

ಸುಳ್ಳು ಪ್ರಕರಣ ದಾಖಲಿಸಿ ಎಎಪಿಯಿಂದ ಕುತಂತ್ರ: ಬಗ್ಗಾ ಭೇಟಿ ಬಳಿಕ ತೇಜಸ್ವಿ ಸೂರ್ಯ

ಪಿಟಿಐ
Published 7 ಮೇ 2022, 16:18 IST
Last Updated 7 ಮೇ 2022, 16:18 IST
ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರನ್ನು ಭೇಟಿ ಮಾಡಿದ ತೇಜಸ್ವಿ ಸೂರ್ಯ – ಪಿಟಿಐ ಚಿತ್ರ
ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರನ್ನು ಭೇಟಿ ಮಾಡಿದ ತೇಜಸ್ವಿ ಸೂರ್ಯ – ಪಿಟಿಐ ಚಿತ್ರ   

ನವದೆಹಲಿ: ‘ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಕೋರ್ಟು, ಬೀದಿಯಲ್ಲಿ ಅಲೆಯುವಂತೆ ಮಾಡಿ ಅವರನ್ನು ಸದೆಬಡಿಯುವುದು ಆಮ್ ಆದ್ಮಿ ಪಕ್ಷದ (ಎಎಪಿ) ತಂತ್ರಗಾರಿಕೆ. ಇದರ ವಿರುದ್ಧ ನಾವು ಹೋರಾಡಲಿದ್ದೇವೆ’ ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಹೇಳಿದರು.

ಪಂಜಾಬ್ ಪೊಲೀಸರಿಂದ ಬಂಧನಕ್ಕೀಡಾಗಿ ಬಿಡುಗಡೆಯಾಗಿರುವ ಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರನ್ನು ನವದೆಹಲಿಯಲ್ಲಿ ಶನಿವಾರ ತೇಜಸ್ವಿ ಸೂರ್ಯ ಭೇಟಿ ಮಾಡಿದರು.

ಬಳಿಕ ದೆಹಲಿ ಮುಖ್ಯಮಂತ್ರಿ ಹಾಗೂ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ತೇಜಸ್ವಿ ಸೂರ್ಯ, ‘ನಿನ್ನೆ ಕುರುಕ್ಷೇತ್ರದಲ್ಲಿ ಧರ್ಮಕ್ಕೆ ಜಯವಾಗಿದೆ. ಅಧರ್ಮವನ್ನು ಸದೆಬಡಿಯಲಾಗಿದೆ. ಆಧುನಿಕ ಜಗತ್ತಿನ ‘ದುರ್ಯೋಧನ ಕೇಜ್ರಿವಾಲ್’ ಅಹಂಗೆ ಸೋಲಾಗಿದೆ’ ಎಂದು ಹೇಳಿದರು.

ADVERTISEMENT

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ತೇಜಸ್ವಿ ಸೂರ್ಯ ಸೇರಿದಂತೆ ಅನೇಕ ಬಿಜೆಪಿ ನಾಯಕರು ಪಕ್ಷದ ದೆಹಲಿ ಘಟಕದ ವಕ್ತಾರರ ಜಾನಕ್‌ಪುರಿ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಲ್ಲದೆ, ಬಗ್ಗಾ ಬಂಧನವನ್ನು ಖಂಡಿಸಿದ್ದಾರೆ.

ಪ್ರಚೋದನಕಾರಿ ಹೇಳಿಕೆ ನೀಡಿದ, ದ್ವೇಷ ಭಾವನೆ ಕೆರಳಿಸಿದ ಮತ್ತು ಬೆದರಿಕೆಯೊಡ್ಡಿದ ಆರೋಪದ ಮೇಲೆ ಪಂಜಾಬ್ ಪೊಲೀಸರು ತಜಿಂದರ್ ಬಗ್ಗಾ ವಿರುದ್ಧ ಪ್ರಕರಣ ದಾಖಲಿಸಿದ್ದರು. ಮೊಹಾಲಿ ನಿವಾಸಿ, ಎಎಪಿ ನಾಯಕ ಸನ್ನಿ ಅಹ್ಲುವಾಲಿಯಾ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿತ್ತು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಹೊರಗೆ ಮಾರ್ಚ್ 30 ರಂದು ಬಿಜೆಪಿ ಯುವ ಘಟಕ ನಡೆಸಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬಗ್ಗಾ ಅವರು ನೀಡಿದ್ದ ಹೇಳಿಕೆಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.