ADVERTISEMENT

ತೆಲಂಗಾಣ: ಚಾರ್ಜ್‌ಗೆ ಹಾಕಿದ್ದ ಇ–ಸ್ಕೂಟರ್ ಬ್ಯಾಟರಿ ಸ್ಫೋಟ, ವ್ಯಕ್ತಿ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಏಪ್ರಿಲ್ 2022, 7:06 IST
Last Updated 21 ಏಪ್ರಿಲ್ 2022, 7:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೈದರಾಬಾದ್: ಮನೆಯಲ್ಲಿ ಚಾರ್ಜ್‌ಗೆ ಹಾಕಿದ್ದ ವಿದ್ಯುತ್‌ ಚಾಲಿತ (ಎಲೆಕ್ಟ್ರಾನಿಕ್‌)ಸ್ಕೂಟರ್‌ನ ಬ್ಯಾಟರಿ ಸ್ಫೋಟಗೊಂಡ ಪರಿಣಾಮ 80 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟು, ಅವರ ಕುಟುಂಬದ ನಾಲ್ವರು ಗಾಯಗೊಂಡಿರುವ ದುರಂತ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದೆ.

ಮೃತಪಟ್ಟವರನ್ನು ಬಿ.ರಾಮಸ್ವಾಮಿ ಎಂದು ಗುರುತಿಸಲಾಗಿದ್ದು, ಅವರ ಮಗ ಬಿ.ಪ್ರಕಾಶ್‌ ಕಳೆದೊಂದು ವರ್ಷದಿಂದ ಇ–ಸ್ಕೂಟರ್‌ ಬಳಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿರುವುದಾಗಿ'ದಿ ಇಂಡಿಯನ್‌ ಎಕ್ಸ್‌ಪ್ರೆಸ್‌' ವರದಿ ಮಾಡಿದೆ.

ಈ ಸಂಬಂಧ ಹೈದರಾಬಾದ್‌ ಮೂಲದ ಸ್ಕೂಟರ್‌ ತಯಾರಕ ಮತ್ತು ವಿತರಕ ಕಂಪೆನಿ ವಿರುದ್ಧ ಐಪಿಸಿಯ 304ಎ (ಬೇಜವಾಬ್ದಾರಿಯಿಂದ ಸಾವಿಗೆ ಕಾರಣ) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದುನಿಜಾಮಾಬಾದ್‌ನ ಸಹಾಯಕ ಪೊಲೀಸ್ ಆಯುಕ್ತ ಎ.ವೆಂಕಟೇಶ್ವರುಲು ತಿಳಿಸಿದ್ದಾರೆ.

ADVERTISEMENT

ಪ್ರಕಾಶ್‌ ಅವರು ಸ್ಕೂಟರ್‌ನಿಂದ ಬ್ಯಾಟರಿ ತೆಗೆದು, ರಾತ್ರಿ 12.30ರ ಸುಮಾರಿಗೆ ಚಾರ್ಚ್‌ಗೆ ಹಾಕಿದ್ದರು. ಬ್ಯಾಟರಿ ಮುಂಜಾನೆ 4 ಗಂಟೆ ವೇಳೆ ಸ್ಫೋಟಗೊಂಡಿದೆ. ಈ ವೇಳೆ ಮನೆಯ ಹಜಾರದಲ್ಲೇ ಮಲಗಿದ್ದ ಪ್ರಕಾಶ್‌ ಅವರ ತಂದೆ ರಾಮಸ್ವಾಮಿ, ತಾಯಿ ಕಮಲಮ್ಮ ಮತ್ತು ಮಗ ಕಲ್ಯಾಣ್‌ ಅವರಿಗೆ ಗಂಭೀರ ಗಾಯಗಳಾಗಿವೆ. ಬೆಂಕಿ ನಂದಿಸುವ ಸಂದರ್ಭದಲ್ಲಿ ಪ್ರಕಾಶ್‌ ಮತ್ತು ಅವರ ಹೆಂಡತಿ ಕೃಷ್ಣವೇಣಿ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

ಗಾಯಾಳುಗಳನ್ನು ಕೂಡಲೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ರಾಮಸ್ವಾಮಿ ಅವರು ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.