ADVERTISEMENT

ಲಂಚದ ಆರೋಪ: ‘ಕೈ’ಗೆ ಟಿಕೆಟ್ ಸಂಕಟ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2018, 18:29 IST
Last Updated 15 ನವೆಂಬರ್ 2018, 18:29 IST

ಹೈದರಾಬಾದ್‌: ಟಿಕೆಟ್‌ ಹಂಚಿಕೆಗೆ ಸಂಬಂಧಿಸಿ ತೆಲಂಗಾಣ ಕಾಂಗ್ರೆಸ್‌ ಮುಖಂಡರಲ್ಲಿ ಅಸಮಾಧಾನ, ಆಕ್ರೋಶ ಭುಗಿಲೆದ್ದಿದೆ. ಟಿಕೆಟ್‌ ಆಕಾಂಕ್ಷಿಗಳಾಗಿದ್ದವರು ಪಕ್ಷದ ಜಿಲ್ಲೆ ಮತ್ತು ರಾಜ್ಯ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಟಿಕೆಟ್‌ಗೆ ಭಾರಿ ಮೊತ್ತದ ಲಂಚಕ್ಕೆ ಬೇಡಿಕೆ ಇಡಲಾಗಿತ್ತು ಎಂದು ರಂಗಾರೆಡ್ಡಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷಕ್ಯಾಮ ಮಲ್ಲೇಶ್‌ ಭಾರಿ ಬಾಂಬ್‌ ಸಿಡಿಸಿದ್ದಾರೆ. ಇಬ್ರಾಹಿಂಪಟ್ಟಣಂ ಟಿಕೆಟ್‌ಗಾಗಿ ₹3 ಕೋಟಿ ಲಂಚಕ್ಕೆಕಾಂಗ್ರೆಸ್‌ ಆಯ್ಕೆ ಸಮಿತಿ ಅಧ್ಯಕ್ಷ ಭಕ್ತ ಚರಣದಾಸ್‌ ಮಗ ಬೇಡಿಕೆ ಇಟ್ಟಿದ್ದರು ಎನ್ನಲಾದ ಧ್ವನಿಸುರುಳಿಯನ್ನು ಮಲ್ಲೇಶ್‌ ಬಿಡುಗಡೆ ಮಾಡಿದ್ದಾರೆ. ಖೈರತಾಬಾದ್‌ ಕ್ಷೇತ್ರದಲ್ಲಿ ದುರ್ಬಲ ಅಭ್ಯರ್ಥಿಗೆ ಟಿಕೆಟ್‌ ನೀಡುವುದಕ್ಕಾಗಿ ಟಿಆರ್‌ಎಸ್‌ ಮುಖಂಡ ದಾನಂ ನಾಗೇಂದರ್‌ ಅವರಿಂದ ಚರಣ್‌ದಾಸ್‌ ಅವರು ₹10 ಕೋಟಿ ಪಡೆದಿದ್ದಾರೆ ಎಂದೂ ಮಲ್ಲೇಶ್‌ ಆರೋಪಿಸಿದ್ದಾರೆ.

ಮುಸ್ಲಿಂ ಮುಖಂಡರೆಲ್ಲರೂ ಸಾಮೂಹಿಕವಾಗಿ ಪಕ್ಷ ಬಿಡುವ ಬಗ್ಗೆ ಯೋಚಿಸುತ್ತಿದ್ದಾರೆ. ತೆಲಂಗಾಣದ ಜನಸಂಖ್ಯೆಗೆ ಅನುಗುಣವಾಗಿ ಸಮುದಾಯದ 14 ಮಂದಿಗೆ ಟಿಕೆಟ್‌ ಕೊಡಬೇಕು ಎಂದು ಅವರು ಬೇಡಿಕೆ ಇರಿಸಿದ್ದರು. ಆದರೆ, ನಾಲ್ಕು ಮಂದಿಗೆ ಮಾತ್ರ ಟಿಕೆಟ್‌ ಸಿಕ್ಕಿದೆ. ರಾಜ್ಯದ 45 ಕ್ಷೇತ್ರಗಳಲ್ಲಿ ಮುಸ್ಲಿಂ ಸಮುದಾಯ ನಿರ್ಣಾಯಕ ಎಂಬುದು ಈ ಮುಖಂಡರ ವಾದ.

ಟಿಡಿಪಿ, ಸಿಪಿಐ ಮತ್ತು ತೆಲಂಗಾಣ ಜನ ಸಮಿತಿ (ಟಿಜೆಎಸ್‌) ಜತೆಗೆ ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿದೆ. ಹಾಗಾಗಿ, ಪಕ್ಷದೊಳಗಿನ ಸಂಕಷ್ಟದ ಜತೆಗೆ, ಮೈತ್ರಿ ಕೂಟದ ಕೊಸರಾಟಗಳನ್ನೂ ಕಾಂಗ್ರೆಸ್ ನಿಭಾಯಿಸಬೇಕಾಗಿದೆ. ಟಿಜೆಎಸ್‌ಗೆ ಎಂಟು ಸೀಟುಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ, ಆ ಪಕ್ಷ ಏಕಪಕ್ಷೀಯವಾಗಿ 12 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಪ್ರಕಟಿಸಿದೆ. ಸಿಪಿಐಗೆ ಮೂರು ಕ್ಷೇತ್ರಗಳನ್ನು ನೀಡಲಾಗಿದೆ. ಈ ಬಗ್ಗೆ ಆರಂಭದಲ್ಲಿ ಅತೃಪ್ತಿ ವ್ಯಕ್ತಪಡಿಸಿದ್ದ ಸಿಪಿಐ ಈಗ ಸುಮ್ಮನಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.