ಹೈದರಾಬಾದ್: ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಶೇ 42ರಷ್ಟು ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಹಿಂದುಳಿದ ವರ್ಗಗಳ ವಿವಿಧ ಸಂಘಟನೆಗಳು ಶನಿವಾರ ತೆಲಂಗಾಣ ಬಂದ್‌ಗೆ ಕರೆ ನೀಡಿದ್ದವು. ಕಾಂಗ್ರೆಸ್, ಬಿಆರ್‌ಎಸ್ ಮತ್ತು ಬಿಜೆಪಿ ಸೇರಿ ಎಲ್ಲ ಪಕ್ಷಗಳು ಬಂದ್‌ಗೆ ಬೆಂಬಲ ನೀಡಿದ್ದವು.
ಮೀಸಲಾತಿ ಹೆಚ್ಚಿಸುವ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಇತ್ತೀಚೆಗೆ ತಡೆ ನೀಡಿತ್ತು. ಇದನ್ನು ಪ್ರಶ್ನಿಸಿ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ‘ಹೈಕೋರ್ಟ್‌ನ ಆದೇಶದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಬಂದ್‌ಗೆ ಕರೆ ನೀಡಲು ಇದೇ ಕಾರಣವಾಯಿತು.
ರಾಜ್ಯದಾದ್ಯಂತ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಂದ್ ಬಹುತೇಕ ಶಾಂತಿಯುತವಾಗಿತ್ತು. ಶಾಲೆ–ಕಾಲೇಜುಗಳು, ಅಂಗಡಿಗಳು ಸ್ವಯಂಪ್ರೇರಿತವಾಗಿ ಮುಚ್ಚಿದ್ದವು. ಬಸ್ ಸಂಚಾರ ಸ್ಥಗಿತವಾಗಿತ್ತು. ಮೀಸಲಾತಿ ಪ್ರಮಾಣ ಏರಿಸುವ ಆದೇಶ ಜಾರಿಗೆ ಬಿಜೆಪಿ ಮತ್ತು ಬಿಆರ್‌ಎಸ್ ತಡೆಯೊಡ್ಡಿವೆ ಎಂದು ಕಾಂಗ್ರೆಸ್ ದೂರಿದರೆ, ಕೋರ್ಟ್‌ನಲ್ಲಿ ಹಿನ್ನಡೆಯಾಗಿದ್ದಕ್ಕೆ ವಿರೋಧ ಪಕ್ಷಗಳು ಕಾಂಗ್ರೆಸ್ ಅನ್ನು ದೂರಿದವು.
‘ಜಾತಿ ಸಮೀಕ್ಷೆ ನಡೆಸಿಯೇ ಮೀಸಲಾತಿ ಪ್ರಮಾಣ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ನಮ್ಮ ಮಸೂದೆಗೆ ರಾಜ್ಯಪಾಲರು ಒಪ್ಪಿಗೆ ನೀಡಿದರು. ಆದರೆ, ಮಾರ್ಚ್ 30ರಿಂದ ಇದು ರಾಷ್ಟ್ರಪತಿಯವರ ಒಪ್ಪಿಗಾಗಿ, ಅವರ ಬಳಿ ಇದೆ’ ಎಂದು ಸಾರಿಗೆ ಸಚಿವ ಪೊನ್ನಂ ಪ್ರಭಾಕರ ಹೇಳಿದರು.
‘ಎರಡು ವರ್ಷಗಳಿಂದ ಪಂಚಾಯಿತಿ ಚುನಾವಣೆ ನಡೆಯದೇ ಇರುವುದು, ಕೇಂದ್ರವು ತಾನು ರಾಜ್ಯಗಳಿಗೆ ನೀಡುವ ಅನುದಾನವನ್ನು ತಡೆಹಿಡಿದಿರುವುದು ನಮಗೆ ಸವಾಲಾಗಿ ಪರಿಣಮಿಸಿದೆ. ಎಲ್ಲ ಪಕ್ಷಗಳು ಈ ಮಸೂದೆಗೆ ಒಪ್ಪಿಗೆ ನೀಡಿವೆ. ಆದರೂ ಕೇಂದ್ರ ಸರ್ಕಾರ ಈ ಬಗ್ಗೆ ಮೌನ ವಹಿಸಿದೆ. ಆದರೆ, ಹಿಂದುಳಿದ ವರ್ಗಗಳ ಸಂಘಟನೆಗಳು ಮತ್ತು ಸರ್ಕಾರವು ಎಲ್ಲ ಪ್ರಯತ್ನಗಳನ್ನು ಮಾಡಲಿದೆ. ಕಾನೂನು ಹೋರಾಟವನ್ನೂ ನಡೆಸಲಿದ್ದೇವೆ’ ಎಂದರು.
‘ನಮಗೆ ಮಾತ್ರವೇ ಶೇ 50ರಷ್ಟು ಮಿತಿ ತೊಡಕೆ?’ ಪ್ರ
ಬಲ ಜಾತಿಗಳಲ್ಲಿ ಬಡವರಿದ್ದಾರೆ ಎಂಬ ನೆಪಯೊಡ್ಡಿ ಆ ಜಾತಿಗಳಿಗೆ ಶೇ 10ರಷ್ಟು ಇಡಬ್ಲ್ಯುಎಸ್ ಮೀಸಲಾತಿ ನೀಡಲಾಯಿತು. ಮೀಸಲಾತಿ ಮಿತಿ ಶೇ 50ರಷ್ಟೇ ಇರಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶವನ್ನು ಶೇ 10ರ ಇಡಬ್ಲ್ಯುಎಸ್ ಮೀಸಲಾತಿಯು ಮೀರುತ್ತದೆ. ಯಾರೂ ಇದನ್ನು ಪ್ರಶ್ನಿಸುವುದಿಲ್ಲ. ಆದರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಹೆಚ್ಚಿಸುವಾಗ ಮಾತ್ರ ಶೇ 50ರ ಮಿತಿ ತೊಡಕು ಎದುರಾಗುತ್ತದೆ. ಪ್ರಬಲ ಜಾತಿಗಳಿಗೆ ಇಲ್ಲದ ಮಿತಿ ಹಿಂದುಳಿದ ಜಾತಿಗಳಿಗೆ ಮಾತ್ರ ಏಕೆ ಅನ್ವಯವಾಗಬೇಕು? ಮಂದಾಕೃಷ್ಣನ್ ಮಾದಿಗ ಮಾದಿಗ ಮೀಸಲಾತಿ ಹೋರಾಟ ಸಮಿತಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.