ADVERTISEMENT

ತೆಲಂಗಾಣ: ರಾಜ್ಯಪಾಲರ ಔತಣಕೂಟಕ್ಕೆ ಕೆಸಿಆರ್‌ ಗೈರು‌, ರಾಜಕೀಯ ವಲಯದಲ್ಲಿ ಚರ್ಚೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಆಗಸ್ಟ್ 2022, 5:36 IST
Last Updated 16 ಆಗಸ್ಟ್ 2022, 5:36 IST
ಕೆ. ಚಂದ್ರಶೇಖರ್ ರಾವ್
ಕೆ. ಚಂದ್ರಶೇಖರ್ ರಾವ್   

ಹೈದರಾಬಾ‌ದ್: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ ಆಯೋಜಿಸಿದ್ದ ‘ಅಟ್ ಹೋಮ್’ (ಔತಣಕೂಟ) ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.

ಶಿಷ್ಟಾಚಾರದಂತೆ ‘ಅಟ್ ಹೋಮ್’ ಕಾರ್ಯಕ್ರಮಕ್ಕೆ ಕೆಸಿಆರ್‌ ಅವರಿಗೆ ಆಹ್ವಾನಿಸಲಾಗಿತ್ತು.‌ ಆದರೆ, ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ. ಇದರೊಂದಿಗೆ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲ ನಡುವಿನ ಭಿನ್ನಾಭಿಪ್ರಾಯ ಮತ್ತೆ ಮುನ್ನೆಲೆಗೆ ಬಂದಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕಳೆದ ವರ್ಷವೂ ರಾಜ್ಯಪಾಲರು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಕೆಸಿಆರ್ ಗೈರಾಗಿದ್ದರು. ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ನಡುವಿನ ಸಂಬಂಧ ಸೌಹಾರ್ದಯುತವಾಗಿಲ್ಲ. ಹಾಗಾಗಿ ರಾಜ್ಯ ಸರ್ಕಾರವು ಶಿಷ್ಟಾಚಾರವನ್ನು ಪಾಲಿಸುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ADVERTISEMENT

ಕೆಸಿಆರ್ ಅವರು ಕಾರ್ಯಕ್ರಮವೊಂದರಲ್ಲಿ ಹಾಜರಾಗಲಿದ್ದಾರೆ ಎಂದು ಮೊದಲೇ ಖಚಿತಪಡಿಸಿದ್ದರು. ರಾಜಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅವರ ಸಂಪುಟದ ಸಚಿವರು, ಸಂಸದರಾಗಲಿ ಭಾಗವಹಿಸಿರಲಿಲ್ಲ ಎಂದು ಮಾಧ್ಯಮಗ‌ಳು ವರದಿ ಮಾಡಿವೆ.

ಸಿಎಂಒ ಮತ್ತು ರಾಜಭವನದ ನಡುವಿನ ಸಂಬಂಧಗಳು ಸೌಹಾರ್ದಯುತವಾಗಿದ್ದಾಗ ಕೆಸಿಆರ್ 2020ರವರೆಗೆ ರಾಜ್ಯಪಾಲರ ‘ಅಟ್ ಹೋಮ್’ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಎರಡು ಕಚೇರಿಗಳ ನಡುವಿನ ವಿವಾದಗಳು ಬಗೆಹರಿಯದಿದ್ದರೂ, ಜೂನ್‌ನಲ್ಲಿ ರಾಜಭವನದಲ್ಲಿ ನಡೆದ ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಉಜ್ಜಲ್‌ ಭುಯನ್‌ ಅವರ ಪ್ರಮಾಣವಚನ ಸಮಾರಂಭದಲ್ಲಿ ಸಿಎಂ ಭಾಗವಹಿಸಿದ್ದರು.

ಕೇಂದ್ರದ ವಿರುದ್ಧ ಕೆಸಿಆರ್ ಗುಡುಗು
ದೇಶದಾದ್ಯಂತ ಸ್ವಾತಂತ್ರ್ಯೋತ್ಸವವನ್ನು ಸೋಮವಾರ ಆಚರಿಸುವ ವೇಳೆ ಹಲವು ಮುಖ್ಯಮಂತ್ರಿಗಳು ಹಲವು ಜನಪರ ಘೋಷಣೆಗಳನ್ನು ಮಾಡಿದ್ದಾರೆ. ಮತ್ತೆ ಕೆಲವು ಮುಖ್ಯಮಂತ್ರಿಗಳು, ಪ್ರಧಾನಿ ಮೋದಿ ಅವರ ‘ಉಚಿತ ಕೊಡುಗೆಗಳ ಸಂಸ್ಕೃತಿ’ ಟೀಕೆಗೆ ಪ್ರತ್ಯುತ್ತರ ನೀಡುವ ವಾಗ್ದಾಳಿಗೆ ಬಳಸಿಕೊಂಡರು.

ಕಲ್ಯಾಣ ಯೋಜನೆಗಳನ್ನು ಉಚಿತ ಕೊಡುಗೆ ಎಂದು ಕರೆಯುವುದು ‘ಅಪಮಾನ ಮಾಡಿದಂತೆ’ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್, ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.

‘ಕೇಂದ್ರ ಸರ್ಕಾರವು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿದೆ. ರಾಜ್ಯಗಳನ್ನು ಆರ್ಥಿಕವಾಗಿ ದುರ್ಬಲಗೊಳಿಸುತ್ತಿದೆ. ಅಧಿಕಾರ ಕೇಂದ್ರೀಕರಣ ಮಾಡುತ್ತಿದೆ. ದಿನಬಳಕೆ ವಸ್ತುಗಳಿಗೆ ತೆರಿಗೆ ವಿಧಿಸಿ, ಬಡ ಮತ್ತು ಮಧ್ಯಮ ವರ್ಗದವರ ಬದುಕಿಗೆ ಬರೆ ಎಳೆದಿದೆ’ ಎಂದು ಅವರು ಆರೋಪಿಸಿದ್ದಾರೆ.

ನೀತಿ ಆಯೋಗದ ಸಭೆಗೂ ಕೆಸಿಆರ್ ಗೈರು
ಆ.7ರಂದು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ನೀತಿ ಆಯೋಗದ ಸಭೆಗೆ ಕೆ. ಚಂದ್ರಶೇಖರ್ ರಾವ್ ಗೈರಾಗಿದ್ದರು.

ಈ ಕುರಿತು ಪ್ರಧಾನಿಗೆ ಪತ್ರ ಬರೆದಿದ್ದ ಕೆಸಿಆರ್‌, ‘ಆಗಸ್ಟ್ 7 ರಂದು ನಡೆಯಲಿರುವ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸುವುದಿಲ್ಲ. ಇದು ಕೇಂದ್ರದ ವಿರುದ್ಧದ ಪ್ರತಿಭಟನೆಯ ಸಂಕೇತವಾಗಿದೆ’ ಎಂದು ತಿಳಿಸಿದ್ದರು.

‘ಜನರ ಅಗತ್ಯಗಳನ್ನು ಪೂರೈಸಲು ರಾಜ್ಯ ಸರ್ಕಾರಗಳು ಯೋಜನೆಗಳನ್ನು ರೂಪಿಸಬೇಕಿದೆ. ಆದರೆ, ಈ ಯೋಜನೆಗಳಿಗೆ ಕೇಂದ್ರವು ಸಹಕರಿಸುತ್ತಿಲ್ಲ’ ಎಂದು ರಾವ್‌ ಹರಿಹಾಯ್ದಿದ್ದರು.

ಮೋದಿ ತೆಲಂಗಾಣಕ್ಕೆ ಬಂದಾಗ ದೇವೇಗೌಡರ ಮನೆಗೆ ಹೋದ ಕೆಸಿಆರ್‌
ಕಳೆದ ಮೇ 26ರಂದು ಪ್ರಧಾನಿ ನರೇಂದ್ರ ಮೋದಿ ಹೈದರಾಬಾದ್‌ ತಲುಪುವುದಕ್ಕೆ ಕೆಲವೇ ಗಂಟೆಗಳ ಮುನ್ನ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್‌ (ಕೆಸಿಆರ್‌) ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಇದರೊಂದಿಗೆ ಎರಡನೇ ಬಾರಿಗೆ ಕೆಸಿಆರ್‌ ಪ್ರಧಾನಿ ಮೋದಿ ಅವರನ್ನು ಭೇಟಿಯಾಗುವುದರಿಂದ ತಪ್ಪಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.